Home Mangalorean News Kannada News ತಾಲೂಕು ಮಟ್ಟದಲ್ಲಿ ಬಾಲಭವನ ಕಟ್ಟಡ ನಿರ್ಮಾಣ : ಜಿ.ಪಂ. ಸಿಇಓ

ತಾಲೂಕು ಮಟ್ಟದಲ್ಲಿ ಬಾಲಭವನ ಕಟ್ಟಡ ನಿರ್ಮಾಣ : ಜಿ.ಪಂ. ಸಿಇಓ

Spread the love

ತಾಲೂಕು ಮಟ್ಟದಲ್ಲಿ ಬಾಲಭವನ ಕಟ್ಟಡ ನಿರ್ಮಾಣ : ಜಿ.ಪಂ. ಸಿಇಓ

ಮಂಗಳೂರು: ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು, ಮಕ್ಕಳಲ್ಲಿ ವಿವಿಧ ಚಟುವಟಿಕೆಗಳನ್ನು  ನಡೆಸಲು ಉಪಯೋಗವಾಗುವಂತೆ  ತಾಲೂಕು ಮಟ್ಟದಲ್ಲಿ ಬಾಲ ಭವನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ. ಅವರು ಹೇಳಿದರು.

ಅವರು ಜಿಲ್ಲಾಧಿಕಾರಿ  ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಜಿಲ್ಲೆಯ  ಮಂಗಳೂರು ಗ್ರಾಮಾಂತರ, ಮಂಗಳೂರು ನಗರ,  ಮತ್ತು ಸುಳ್ಯ ದಲ್ಲಿ ಇದಕ್ಕಾಗಿ ನಿವೇಶನಗಳನ್ನು ಗುರುತಿಸಲಾಗಿದೆ  ಎಂದು ತಿಳಿಸಿದರು.

ಮಂಗಳೂರು ನಗರದಲ್ಲಿ ಬಾಲ ಭವನದ ಕಟ್ಟಡ  ದುರಸ್ತಿ ಕಾರ್ಯವು  ನಡೆಯುತ್ತಿದ್ದು  ಕೆಲವೊಂದು ಕಾಮಗಾರಿಗಳು ಬಾಕಿ ಉಳಿದಿದೆ. ಸ್ಮಾರ್ಟ್ ಸಿಟಿಯ ವತಿಯಿಂದ  ಉಳಿದಿರುವಂತಹ ಕಾಮಗಾರಿಯನ್ನು  ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ನಗರದ ಕದ್ರಿ ಉದ್ಯಾನವನದಲ್ಲಿರುವ  ಪುಟಾಣಿ ರೈಲು ಈಗಾಗಲೇ ದುರಸ್ತಿಗೊಂಡಿದ್ದು  ಮಳೆಯ ಕಾರಣದಿಂದ ರೈಲಿನ ಓಡಾಟವನ್ನು ಸ್ಥಗಿತಗೊಳಿಸಿದ್ದು  ಮಳೆ ಕಡಿಮೆಯಾದ ನಂತರ  ಪುಟಾಣಿ ರೈಲು ಮತ್ತೆ  ಓಡಾಟವನ್ನು ನಡೆಸಲಿದೆ ಎಂದು ಅವರು ಹೇಳಿದರು.

ಗ್ರಾಮೀಣ ಹಂತದಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಭೆಗಳು ಕೇವಲ  ಕಾಟಾಚಾರಕ್ಕೆ  ಹಾಜರಾತಿ ಹಾಕುವ ಮೂಲಕ ಕೊನೆಗೂಳ್ಳಬಾರದು, ಅತ್ಯಾಚಾರ, ವರದಕ್ಷಿಣೆ, ಬಾಲ್ಯ ವಿವಾಹ, ಕೌಟುಂಬಿಕ ಕಲಹ, ಮಹಿಳಾ ಶೋಷಣೆ  ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಗ್ರಾಮೀಣ  ಮಟ್ಟದಲ್ಲಿ  ಜನಸಾಮಾನ್ಯರಿಗೆ ಜಾಗೃತಿಯನ್ನು ಮೂಡಿಸುವಂತೆ ಆಗಬೇಕು. ಇಂತಹ ಶೋಷಣೆಗಳು ನಡೆದಲ್ಲಿ  ಶೋಷಿತನಾದವನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವಂತೆ  ಆತ್ಮಸ್ಥೈರ್ಯ ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಉಪನಿರ್ದೇಶಕ ಉಸ್ಮಾನ್ ಅವರು ಮಾತನಾಡಿ 2024 ಏಪ್ರಿಲ್ ನಿಂದ ಜೂನ್ ವರೆಗೆ  ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ತಲಾ ಒಂದೊಂದು ಬಾಲ್ಯ ವಿವಾಹ ಪ್ರಕರಣಗಳು  ಪತ್ತೆಯಾಗಿದೆ, ಒಂದು ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿ  ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದರು.

ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು  ಎಲ್ಲಾ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿ ಅಡಿಯಲ್ಲಿ  ಅಂಗನವಾಡಿ ಕಾರ್ಯಕರ್ತರಿಗೆ, ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ತಾಯಂದಿರ ಸಭೆ, ಸ್ತ್ರೀಶಕ್ತಿ ಸಭೆ,  ಬಾಲವಿಕಾಸ ಸಮಿತಿ ಸಭೆಗಳಲ್ಲಿ ಹಾಗೂ  ಶಾಲಾ ಶಿಕ್ಷಕರಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು  ತಾಯಂದಿರ ಸಭೆ, ತ್ರಿಶಕ್ತಿ ಸಭೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಸಭೆಗಳಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಾಗೂ ಮಿಷನ್ ಶಕ್ತಿ ಯೋಜನೆ ಅಡಿ ಜೂನ್ 21ರಿಂದ ಅಕ್ಟೋಬರ್ 4ರ ವರೆಗೆ 100 ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯ ಕುರಿತು ಮಾಹಿತಿಯನ್ನು  ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯಲ್ಲಿರುವ ಸಾಂತ್ವಾನ ಕೇಂದ್ರಗಳಲ್ಲಿ ಸಿಬ್ಬಂದಿಗಳು ಪಾಳಿಯಲ್ಲಿ ದಿನದ 24 ಗಂಟೆಯೂ  ಕೆಲಸ ಮಾಡುತ್ತಿದ್ದು  ಹಲವಾರು ವರ್ಷಗಳಿಂದ  ಗೌರವಧನ ಹೆಚ್ಚಾಗದ ಕಾರಣ ಸಿಬ್ಬಂದಿಗಳು ಗೌರವಧನವನ್ನು ಹೆಚ್ಚಿಸುವಂತೆ  ಸಭೆಯಲ್ಲಿ ಮನವಿ ಸಲ್ಲಿಸಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಹುಟ್ಟಿಕೊಂಡಿರುವ ಸ್ತ್ರೀಶಕ್ತಿ  ಸಂಘದಲ್ಲಿ ಸ್ತ್ರೀಶಕ್ತಿ ಸಹಕಾರಿ ಬ್ಯಾಂಕ್ ಗಳಿಗೆ ಸರಕಾರದಿಂದ ಕಡಿಮೆ ಬಡ್ಡಿಯಲ್ಲಿ ಠೇವಣಿ ನೀಡುವಂತೆ ಇದರಿಂದ ಹಲವಾರು  ಮಹಿಳೆಯರಿಗೆ ಹೆಚ್ಚಿನ ಸಾಲವನ್ನು ನೀಡಲು ಉಪಯೋಗವಾಗುತ್ತದೆ  ಎಂದು ಜಿಲ್ಲಾ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಅಧ್ಯಕ್ಷರ ಮೂಲಕ ಸರಕಾರಕ್ಕೆ ಮನವಿ ಮಾಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ  ಅಧಿಕಾರಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version