ತೀಯಾ ಸಮಾಜ ಮುಂಬಯಿ, ಸತ್ಯನಾರಾಯಣ ಪೂಜೆ, ಅರಸಿನ ಕುಂಕುಮ, ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ
ಮುಂಬಯಿ : ಇಂದು ನಿಜವಾಗಿಯೂ ಮಹಿಳಾ ವಿಭಾಗದ ಕಾರ್ಯಕ್ರಮದಂತೆ ಕಾಣುತ್ತದೆ. ಯಾಕೆಂದರೆ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಬಾಗವಹಿಸಿದ ಎಲ್ಲಾ ಕಲಾವಿದರು ಮಹಿಳೆಯರೇ. ಈ ರೀತಿ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮ ಸಮಾಜದ ಮಹಿಳಾ ವಿಭಾಗದಿಂದ ನಡೆಯಲಿ ಎಂದು ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್ ಬೆಳ್ಚಡ ನುಡಿದರು.
ತೀಯಾ ಸಮಾಜ ಮಂಬಯಿಯ ಮಹಿಳಾ ವಿಭಾಗದ ವತಿಯಿಂದ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ, ಅರಸಿನ ಕುಂಕುಮ ಹಾಗೂ ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ. 2 ರಂದು ಸಮಾಜದ ಅಧ್ಯಕ್ಷರಾದ ಕೃಷ್ಣ ಎನ್ ಉಚ್ಚಿಲ್ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಕೆ ಉಳ್ಳಾಲ್ ಇವರ ನೇತೃತ್ವದಲ್ಲಿ ಜೋಗೇಶ್ವರಿ ಪೂರ್ವದ ಅಶ್ಮಿತಾ ಭವನದ ಸಭಾಗೃಹದಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅವರು ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳ ತಾಲೂಕು, ಸಿಂಹಮೂಲೆ ಎರುಂಬು ಇಲ್ಲಿನ ಬೋಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಶ್ರೀ ಚಿರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಭ್ರಹ್ಮಕಲಶೋತ್ಸವ ಸಮಾರಂಭವು ಇದೇ ಮಾರ್ಚ್ 9 ರಿಂದ 16 ರ ತನಕ ಕ್ಷೇತ್ರದ ಜೀರ್ಣೋದ್ದಾರದ ಪ್ರಮುಖ ವ್ಯಕ್ತಿ ಕೃಷ್ಣ ಎನ್ ಉಚ್ಚಿಲ್ ಇವರ ನೇತೃತ್ವದಲ್ಲಿ ನಡೆಯಲಿದ್ದು ಮುಂಬಯಿಯ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯದಲ್ಲಿ ಉಪಸ್ಥಿತರಿದ್ದು ಭಗವತೀ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದರು.
ಶ್ರೀ ಕ್ಷೇತ್ರದ ಮುಂಬಯಿ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಬಂಗೇರ ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಕ್ಷೇತ್ರದ ಭ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೃಷ್ಣ ಎನ್ ಉಚ್ಚಿಲ್ ಅವರು ಸಮಾಜದ ಮಹಿಳಾ ವಿಭಾಗದವರು ಉತ್ತಮ ರೀತಿಯಲ್ಲಿ ಇಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಳನ್ನು ಆಯೋಜಿಸಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಬೋಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಭ್ರಹ್ಮಕಲಶೋತ್ಸವ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲು ಎಲ್ಲರನ್ನು ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಮಂಜೇಶ್ವರದಿಂದ ಆಗಮಿಸಿದ ಲಕ್ಷ್ಮಣ್ ಸಾಲ್ಯಾನ್ ವೈದ್ಯರ್ ಅವರು ತೀಯಾ ಸಂಸ್ಕೃತಿ ಬಗ್ಗೆ ಮಾತನಾಡಿ ತೀಯಾ ಸಮುದಾಯವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು ಸಮಾಜದ ಇಂದಿನ ಜನಾಂಗಕ್ಕೆ ಅದರ ಅರಿವಿನ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ತೀಯಾ ಸಮಾಜದ ಅಧ್ಯಕ್ಷರಾದ ಕೃಷ್ಣ ಎನ್ ಉಚ್ಚಿಲ್, ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್ ಬೆಳ್ಚಡ, ಟ್ರಷ್ಟಿಗಳಾದ ಡಾ. ದಯಾನಂದ ಕುಂಬ್ಳೆ ಮತ್ತು ಟಿ. ಬಾಬು ಬಂಗೇರ, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಆರೋಗ್ಯ ನಿಧಿಯ ಮಾಜಿ ಕಾರ್ಯಾಧ್ಯಕ್ಷ ತಿಮ್ಮಪ್ಪ ಬಂಗೇರ, ಮಹಿಳಾ ಕಾರ್ಯಾಧ್ಯಕ್ಷೆ ಆಶಲತಾ ಉಳ್ಳಾಲ್, ಹಿರಿಯರಾದ ಉಮೇಶ್ ಮಂಜೇಶ್ವರ್, ಆನಂದ ಬಂಗೇರ, ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ್ ಮತ್ತು ಮಾಜಿ ಕಾರ್ಯದರ್ಶಿ ಈಶ್ವರ ಎಂ. ಐಲ್ ಉಪಸ್ಥಿತರಿದ್ದರು.
ವಿವಿಧ ಮನೋರಂಜನಾ ಕಾರ್ಯಕ್ರಮಗಳಲ್ಲದೆ ಚಿತ್ರ ಕಲ್ಲಾ ಸ್ಪರ್ಧೆ, ಅಡುಗೆ ಸ್ಪರ್ಧೆ, ಬೋಳ್ನಾಡು ಕ್ಷೇತ್ರದ ಬಗ್ಗೆ ವಿಡಿಯೋ ಕ್ಲಿಪ್ ಹಾಗೂ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.
ಶ್ರೀಧರ ಸುವರ್ಣ, ಕವಿತಾ ಬೆಳ್ಚಡ, ವಿಭಾ ಜಗದೀಶ್ ಸಾಲ್ಯಾನ್, ಕಾರ್ಯಕ್ರಮವನ್ನು ನಿರ್ವಹಿಸಿದರು. ಶುಭಾ ಗುಜರನ್, ಶಶಿಪ್ರಭಾ ಬಂಗೇರ, ಪ್ರೀತಿ ಮಂಜೇಶ್ವರ್, ಕವಿತಾ ಬೆಳ್ಚಡ, ರಾಜಶ್ರೀ ಬೆಳ್ಚಡ, ಕುಮುದ ಕೋಟ್ಯಾನ್, ಸುಜಾತ ಸಾಲ್ಯಾನ್, ವೈಶಾಲಿ ಬಂಗೇರ, ಸುನಿತಾ ಬಂಗೇರ, ಮಮತ, ರಜನಿ ಸಾಲ್ಯಾನ್, ಆಶಾ ಸಾಲ್ಯಾನ್ ಮತ್ತಿತರರು ಸಹಕರಿಸಿದರು.