ತುರವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ

Spread the love

ತುರವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ “ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ” ದಿನಾಂಕ ಮಂಗಳವಾರದಂದು ಜಪ್ಪು ಮಹಕಾಳಿ ಪಡ್ಪು ರೈಲ್ವೆ ಗೇಟ್ ಬಳಿ ಇರುವ ಸಂಕಪ್ಪ ಹಾಲ್‍ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್ ಹೆಗಡೆಯವರು, ತು.ರ.ವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಹಾಗೂ ಮಾರುತಿ ಒಮ್ನಿ ಆಂಬ್ಯುಲೆನ್ಸ್‍ನ್ನು ಸರ್ಕಾರ ನಿಷೇಧಿಸಿದಾಗ ಎಲ್ಲಾ ಆ್ಯಂಬುಲೆನ್ಸ್ ಮಾಲಕರನ್ನು ಒಟ್ಟುಗೂಡಿಸಿ ತಕ್ಷಣ ಸರಕಾರಕ್ಕೆ ಮನವಿ ಸಲ್ಲಿಸಿ ನಿಷೇಧ ತೆರವುಗೊಳಿಸಲು ಶ್ರಮಿಸಿದ್ದನ್ನು ನೆನಪಿಸಿಕೊಂಡರು. ಹಾಗೂ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಸಂಘ ಸ್ಥಾಪಿಸಿರುವುದು ಶ್ಲಾಘನೀಯ, ಹಾಗೂ ಆಂಬ್ಯುಲೆನ್ಸ್ ಚಾಲಕರು ಜೀವರಕ್ಷಕರು, ಆದರೆ ಅವರು ಚಾಲನೆ ಮಾಡುವ ಸಂದರ್ಭದಲ್ಲಿ ತಮ್ಮ ಜೀವದ ರಕ್ಷಣೆ ಮಾಡುವ ಅಗತ್ಯವಿದೆ. ಖಾಸಗಿ ಸಂಸ್ಥೆಯೊಂದು ಆ್ಯಂಬುಲೆನ್ಸ್ ಚಾಲಕರ ಹೆಸರು ಮತ್ತು ವಿಳಾಸದ ಮೊಬೈಲ್ ಸಾಪ್ಟ್‍ವೇರ್ ತಯಾರಿಸುತ್ತಿದ್ದು, ಒಬ್ಬ ಪ್ರಯಾಣಿಕ ಯಾವುದೇ ಪ್ರದೇಶದಲ್ಲಿದ್ದರೂ ಆ ಪ್ರದೇಶದ ಆ್ಯಂಬುಲೆನ್ಸ್ ಮಾಲಕರ ಮಾಹಿತಿ ಇದರಲ್ಲಿ ಸಿಗಲಿದೆ. ಇದಕ್ಕಾಗಿ ತಮ್ಮ ಕಛೇರಿಗೆ ಬಂದು ಆ್ಯಂಬುಲೆನ್ಸ್ ಮಾಲಕರು ಹಾಗೂ ಚಾಲಕರು ಹೆಸರು, ವಿಳಾಸ ನೊಂದಾಯಿಸುವಂತೆ ವಿನಂತಿಸಿಕೊಂಡರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಂದರು ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಎಂ.ಸಿ.ಮದನ್‍ರವರು ತುಳುನಾಡ ರಕ್ಷಣಾ ವೇದಿಕೆ ಉತ್ತಮ ಜನಪರ ಕೆಲಸಗಳನ್ನು ಮಾಡುತ್ತಿದೆ. ಆ್ಯಂಬುಲೆನ್ಸ್ ಮಾಲಕರು ಬಡ ರೋಗಿಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದಾರೆ. ತಮ್ಮ ಇಲಾಖೆಯವರು ಹಾಗೂ ಆ್ಯಂಬುಲೆನ್ಸ್ ಚಾಲಕರು ಅಪಘಾತದ ಸಂದರ್ಭದಲ್ಲಿ ಕೆಲವು ಸಂದಿಘ್ನ ಸನ್ನಿವೆಶಗಳನ್ನು ಎದುರಿಸಿದ್ದನ್ನು ನೆನಪಿಸಿಕೊಂಡು, ಆ್ಯಂಬುಲೆನ್ಸ್ ಮಾಲಕರು ಹಾಗೂ ಚಾಲಕರಿಗೆ ನನ್ನ ಸಂಪೂರ್ಣ ಸಹಕಾರವಿದೆ. ಯಾವುದೇ ಕಷ್ಟಕರ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಕರೆ ನೀಡಿದರು.

ಮತ್ತೋರ್ವ ಅತಿಥಿಗಳಾದ ಕಾರ್ಮಿಕ ನಿರೀಕ್ಷಕರುಗಳಾದ ವೀರೇಂದ್ರ ಹಾಗೂ ಮೇರಿಯವರು ಆ್ಯಂಬುಲೆನ್ಸ್ ಚಾಲಕರಿಗೆ ಅಪಘಾತದ ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ಕಾನೂನು ತೊಡಕಾಗದಿರುವ “ಹರೀಶ್ ಸಾಂತ್ವನ ಯೋಜನೆ”ಯ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತು.ರ.ವೇ ಸ್ಥಾಪಕಾಧ್ಯಕ್ಷರಾದ  ಯೋಗೀಶ್ ಶೆಟ್ಟಿ ಜಪ್ಪುರವರು, ಕರ್ನಾಟಕದಲ್ಲಿಯೇ ಪ್ರಥಮವಾಗಿ ತುಳುನಾಡಿನಲ್ಲಿ ತು.ರ.ವೇ ಅಡಿಯಲ್ಲಿ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಸಂಘವನ್ನು ರಚಿಸಲಾಗಿದೆ. ಇದಕ್ಕಾಗಿ ಎಲ್ಲಾ ಆ್ಯಂಬುಲೆನ್ಸ್ ಮಾಲಕರು ಹಾಗೂ ಚಾಲಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಸಂಘದ ಉದ್ದೇಶವೇನೆಂದರೆ ಮುಂದಿನ ದಿನಗಳಲ್ಲಿ ಆ್ಯಂಬುಲೆನ್ಸ್ ಮಾಲಕ ಹಾಗೂ ಚಾಲಕರಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಚಾಲಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಹಾಗೂ ಈ ಸಂಘದ ಸದಸ್ಯರಲ್ಲಿ ಸ್ನೇಹ, ಹೊಂದಾಣಿಕೆ ಏರ್ಪಟ್ಟು ಸಂಘ ಇನ್ನಷ್ಟು ಬಲಪಡಿಸಬೇಕಾಗಿದೆ ಎಂದರು, ಹಾಗೂ 2010 ಮೇ 22ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಸಂದರ್ಭದಲ್ಲಿ ನಮ್ಮ ಮಂಗಳೂರಿನ ಆ್ಯಂಬುಲೆನ್ಸ್ ಮಾಲಕರು ಮತ್ತು ಚಾಲಕರು ತಮ್ಮ ಜೀವವನ್ನು ಲೆಕ್ಕಿಸದೆ ಸುಟ್ಟು ಕರಗಲಾದ ಮೃತ ದೇಹವನ್ನು  ಸಾಗುಸುವಲ್ಲಿ ನೆರವು ನೀಡಿದನ್ನು ಸ್ಮರಿಸಿಕೊಂಡರು. ಹಾಗೂ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ತು.ರ.ವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಅಧ್ಯಕ್ಷರಾದ ಗಂಗಾಧರ್, ಉಪಾಧ್ಯಕ್ಷರಾದ ನಿತ್ಯಾನಂದ ವಾಮಂಜೂರು, ದೇವಿಪ್ರಸಾದ್ ಕಾವೂರು, ಪ್ರಧಾನ ಕಾರ್ಯದರ್ಶಿ ಸಿ.ಎಸ್ ರಾಧಿಕಾ, ಹಾಗೂ ತು.ರ.ವೇ ಮುಖಂಡರಾದ ಅಬ್ದುಲ್ ರಶೀದ್ ಜಪ್ಪು, ಜೆ ಇಬ್ರಾಹಿಂ, ಅರುಣ್ ಡಿ’ಸೋಜ ಅಸೈಗೋಳಿ ಮುಂತಾದವರಿದ್ದರು.

ಪ್ರಶಾಂತ್ ಭಟ್ ಕಡಬ ಪ್ರಸ್ತಾವಿ ಭಾಷಣ ಮಾಡಿದರೆ, ಆನಂದ್ ಅಮೀನ್ ಅಡ್ಯಾರ್ ಧನ್ಯವಾದಗೈದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಭಾಷಣವನ್ನು ರಹೀಮ್ ಕುತ್ತಾರ್ ನಿರ್ವಹಿಸಿದರು.


Spread the love