ತುರ್ತು ಸೇವೆಗಳಿಗೆ ತೆರಳಲು ಅಗತ್ಯವಿರುವ ಇ-ಪಾಸ್ ಪಡೆಯಲು ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಜಗದೀಶ್

Spread the love

ತುರ್ತು ಸೇವೆಗಳಿಗೆ ತೆರಳಲು ಅಗತ್ಯವಿರುವ ಇ-ಪಾಸ್ ಪಡೆಯಲು ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಜಗದೀಶ್

ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂಧಕಾಜ್ಞೆ ಜ್ಯಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರಿಕರ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ. ಈ ಸಂಬಂಧ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ವೈದ್ಯಕೀಯ ನೆಲೆಯಲ್ಲಿ, ಅವಶ್ಯಕ ವಸ್ತುಗಳನ್ನು ಬೇರೆ ಜಿಲ್ಲೆಗೆ ಸರಬರಾಜು ಮಾಡಲು ಹಾಗೂ ಇತರೆ ಕಾರಣಕ್ಕಾಗಿ ಅಂತರ್ ರಾಜ್ಯ, ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಪ್ರತಿದಿನ ಜಿಲ್ಲಾಧಿಕಾರಿಗಳ ಕಚೇರಿಗೆ 50-60 ಜನರು ಬರುತ್ತಿದ್ದಾರೆ. ಈ ರೀತಿ ಅನುಮತಿಗಾಗಿ ಸಾರ್ವಜನಿಕರು ನಿರ್ಬಂಧ ಇರುವ ಸಂದರ್ಭದಲ್ಲಿ ಗುಂಪು ಗುಂಪಾಗಿ ಬರುವುದು ನಿರ್ಬಂಧ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ದರಿಂದ ಈ ಕೆಳಗೆ ತಿಳಿಸಿರುವ ವಿಚಾರದ ಬಗ್ಗೆ ಅನುಮತಿಗಾಗಿ ಸಾರ್ವಜನಿಕರು ಅರ್ಜಿಗಳನ್ನು ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅವರ ಪ್ರಕಟಣೆ ತಿಳಿಸಿದೆ.

ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಬೇರೆ ಜಿಲ್ಲೆಗೆ ತೆರಳಿ ಚಿಕಿತ್ಸೆ ಪಡೆಯಲು, ಅಂದರೆ ಈ ಹಿಂದೆ ಸದ್ರಿ ಜಿಲ್ಲೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರೆ ಅದನ್ನು ಮುಂದುವರೆಸಲು ಮಾತ್ರ

ಅಗತ್ಯ ಸೇವೆಗಳ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸುವ ಸಲುವಾಗಿ ಈ ಮೇಲೆ ತಿಳಿಸಿರುವ ಕಾರಣಗಳಿಗಾಗಿ ಅರ್ಜಿದಾರರು ಈ ಕೆಳಗೆ ತಿಳಿಸಿರುವ ಮಾಹಿತಿಯೊಂದಿಗೆ ಅರ್ಜಿಗಳನ್ನು ತಹಶೀಲ್ದಾರರಿಗೆ ಸಲ್ಲಿಸಬಹುದಾಗಿದೆ.

ತುರ್ತು ವೈದ್ಯಕೀಯ ಕಾರಣಗಳಿಗಾಗಿ ಬೇರೆ ಜಿಲ್ಲೆಗೆ ತೆರಳಲು ಅನುಮತಿ ಕೋರುವವರು ವೈದ್ಯಕೀಯ ದೃಢಪತ್ರದೊಂದಿಗೆ ಅರ್ಜಿ ಸಲ್ಲಿಸುವುದು. ಹಿಂದೆ ಚಿಕಿತ್ಸೆ ಪಡೆದ ಬಗ್ಗೆ ದಾಖಲೆಗಳನ್ನು ಸಲ್ಲಿಸುವುದು.

ಅನುಮತಿ ಕೋರುವವರು ಯಾವ ಉದ್ದೇಶಕ್ಕೆ/ಯಾವ ದಿನಾಂಕ/ಯಾರು ಪ್ರಯಾಣಿಸುತ್ತಾರೆ ಎಂಬ ಬಗ್ಗೆ ಅವಶ್ಯ ಮಾಹಿತಿ ದಾಖಲೆಗಳೊಂದಿಗೆ ಹಾಗೂ ವಾಹನದ ಮಾಹಿತಿಯೊಂದಿಗೆ ಕೋರಿಕೆ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ನೀಡತಕ್ಕದ್ದು (ಗೂಡ್ಸ್ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ)

ಯಾವ ವಾಹನದಲ್ಲಿ ಪ್ರಯಾಣಿಸುತ್ತಾರೆ ಆ ವಾಹನದ ದಾಖಲೆಗಳ ಪ್ರತಿ

ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ತಹಶೀಲ್ದಾರರು ಪರಿಶೀಲನೆ ನಡೆಸಿ ಸರಿಯಾದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಪರಿಶೀಲಿಸುವುದು ಮೇಲೆ ತಿಳಿಸಿದ ತುರ್ತು ವೈದ್ಯಕೀಯ ಹಾಗೂ ತುರ್ತು ಸೇವೆ ಕರ್ತವ್ಯಕ್ಕೆ ಹಾಜರಾಗಲು ಕೋರಿರುವುದು ಸಮಂಜಸವಾಗಿದೆ ಎಂದು ಮನವರಿಕೆಯಾದಲ್ಲಿ ಹಾಗೂ ಅನುಮತಿ ನೀಡುವುದು ಅಗತ್ಯವೆಂದ ಕಂಡು ಬಂದಲ್ಲಿ ಆನ್ ಲೈನ್ ನಲ್ಲಿ ಜಿಲ್ಲಾಧಿಕಾರಿಯವರ ಕಛೇರಿಗೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿ ಈ ಅರ್ಜಿಗಳನ್ನು ಪರಿಶೀಲನೆ ನಡೆಸಿ ಈ-ಪಾಸ್ ಮೂಲಕ ಅನುಮತಿಯನ್ನು ನೀಡಲಾಗುತ್ತದೆ.

ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾರದೆ ನೇರವಾಗಿ ಸಂಬಂಧಪಟ್ಟ ತಹಶೀಲ್ದಾರರ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ 12 ರವರೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಈ-ಪಾಸ್ ಮೂಲಕ ಪಡೆಯಬಹುದಾಗಿದೆ. ಸಾರ್ವಜನಿಕರು ಅನುಮತಿಗಾಗಿ ಯಾವುದೇ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವು ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love