ತುಳುನಾಡಿನ ಎಲ್ಲಾ ಮಠ-ಮಂದಿರಗಳಲ್ಲಿ ರಾಮಾಯಣ ಪಾರಾಯಣ ನಡೆಯಬೇಕು-ತಿಮ್ಮಪ್ಪ ಶೆಟ್ಟಿ
ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಪ್ರತಿ ಮನೆಮನೆಗಳಲ್ಲೂ ರಾಮಾಯಣ ಪಾರಾಯಣ ನಡೆಯುತ್ತಿತ್ತು ಎಂಬುದು ಹಿರಿಯರಿಂದ ತಿಳಿದ ವಿಚಾರ. ಆದರೆ ಈಗ ಕೆಲವೊಂದು ಕಡೆಗಳಲ್ಲಿ ಮಾತ್ರವೇ ಆಚರಣೆ ನಡೆದು ಬರುತ್ತಿದ್ದು ನಾಡಿನ ಎಲ್ಲಾ ಮಠ ಮಂದಿರ ದೇವಸ್ಥಾನಗಳಲ್ಲೂ ರಾಮಾಯಣ ಪಾರಾಯಣ ನಡೆಯಬೇಕು. ಅದರಲ್ಲೂ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ತುಳು ಮಂದಾರ ರಾಮಾಯಣವೇ ಪಾರಾಯಣ ಆಗಬೇಕು. ಹಾಗಾದರೆ ಮಾತ್ರ ಈ ಕಾರ್ಯಕ್ರಮದ ಮುಖ್ಯ ಗುರಿತಲುಪಲು ಸಾಧ್ಯ ಹಾಗೂ ತುಳುನಾಡಿನ ಮಹಾನ್ ಕವಿಗೆ ನಾಡಿನ ಗೌರವ ಸಲ್ಲಲು ಸಾಧ್ಯ ಎಂದು ನಿವೃತ್ತ ಭವಿಷ್ಯನಿಧಿ ಅಧಿಕಾರಿ ತಿಮ್ಮಪ್ಪ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಶಕ್ತಿನಗರದ ಚಾವಡಿಯಲ್ಲಿ ನಡೆಯುತ್ತಿರುವ ತುಳು ವರ್ಲ್ಡ್ ಮಂಗಳೂರು ಹಾಗೂ ತುಳುವೆರೆ ಕೂಟ ಶಕ್ತಿನಗರ ಇವರು ಸಂಯುಕ್ತವಾಗಿ ಆಯೋಜಿಸಿರುವ ಏಳದೆ ಮಂದಾರ ರಾಮಾಯಣ ಸುಗಿಪು ದುನಿಪು ಕಾರ್ಯಕ್ರಮದ ಎರಡನೇ ದಿನದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಿನ್ನೆ ನಡೆದ ಮಂದಾರ ರಾಮಾಯಣದ ಎರಡನೇ ದಿನದ ಬಂಗಾರದ ತೊಟ್ಟಿಲು ವಾಚನವನ್ನು ಕದ್ರಿ ನವನೀತ್ ಶೆಟ್ಟಿ ವ್ಯಾಖ್ಯಾನಿಸಿದರೆ ತಮ್ಮ ಸುಶ್ರಾವ್ಯ ಕಂಠದಿಂದ ಪ್ರಶಾಂತ್ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ತಮ್ಮ ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ನನ್ನಾಗಿಸಿದರು. ಸುಗಿಪು ದುನಿಪು ಕಾರ್ಯಕ್ರಮ ಮುಗಿದಾಗ ಎಲ್ಲರಿಗೂ ಇಷ್ಟುಬೇಗ ಕಾರ್ಯಕ್ರಮ ಮುಗಿಯಿತೆ ಎಂದೆನಿಸಿತು.