ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟ

Spread the love

ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2015 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಿದ್ದು, ಗೌರವ ಪ್ರಶಸ್ತಿಗೆ ಬೆಂಗಳೂರಿನ ಡಾ ಇಂದಿರಾ ಹೆಗ್ಡೆ (ತುಳು ಸಾಹಿತ್ಯ), ಕೋಟಿ ಪರವ (ತುಳು ಜಾನಪದ) ಹಾಗೂ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ) ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

tulu-acadamy-award tulu-acadamy-award-00

ಉರ್ವಾಸ್ಟೋರಿನ ತುಳು ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಆಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರು ಪುಸ್ತಕ ಬಹುಮಾನಕ್ಕೆ ಕಥಾ ವಿಭಾಗದಲ್ಲಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರ ಗುತ್ತುದಿಲ್ಲದ ಜಾಲ್ಡ್, ಕವನ ವಿಭಾಗದಲ್ಲಿ ಚೆನ್ನಪ್ಪ ಅಳಿಕೆಯವರ ಬೂಳ್ಯ ಹಾಗೂ ನಾಟಕ ವಿಭಾಗದಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣ ಅವರ ಗಾಲ ಕೃತಿಗಳು ಆಯ್ಕೆಗೊಂಡಿವೆ ಎಂದು ತಿಳಿಸಿದರು.

2015ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದವರ ಪರಿಚಯ
ಡಾ. ಇಂದಿರಾ ಹೆಗ್ಡೆ (ತುಳು ಸಾಹಿತ್ಯ, ಸಂಶೋಧನಾ ಕ್ಷೇತ್ರ): ಡಾ. ಇಂದಿರಾ ಹೆಗ್ಡೆ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಳತ್ತೂರು ಗುತ್ತಿನವರು. ಚೇಳಾರು ಗುತ್ತು ಸೀತಾರಾಮ ಹೆಗ್ಡೆ (ಎಸ್. ಆರ್. ಹೆಗ್ಡೆ) ಯವರನ್ನು ಮದುವೆಯಾದ ಬಳಿಕ ಪತಿಯ ಪ್ರೋತ್ಸಾಹದಿಂದ, ಬಿ.ಎ., ಎಂ.ಎ., ಡಿ.ಲಿಟ್ ಪದವಿ ಗಳಿಸಿದ ಇಂದಿರಾ ಹೆಗ್ಡೆ ಸಣ್ಣಕತೆ, ಕವನ, ಕಾದಂಬರಿಗಳನ್ನು ಬರೆದು ಪ್ರಕಟಿಸುವ ಮೂಲಕ ಸಾಹಿತ್ಯ ರಂಗದಲ್ಲಿ ಮುಂದಡಿ ಇಟ್ಟರು. ನಾಡಿನ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿಯವರ ಉತ್ತೇಜನದಿಂದ ಸಂಶೋಧನಾ ಕ್ಷೇತ್ರಕ್ಕಿಳಿದು ‘ಬಂಟರು ಒಂದು ಸಮಾಜೋ ಸಾಂಸ್ಕತಿಕ ಅಧ್ಯಯನ’ ಕೃತಿಯನ್ನು ರಚಿಸಿದರು. ಈ ಬೃಹತ್ ಕೃತಿ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಶ್ರೀ.ಎಸ್.ಎನ್.ಡಿ.ಪೂಜಾರಿಯವರಿಂದ ಇಂಗ್ಲಿಷ್‍ಗೆ ಭಾಷಾಂತರಗೊಂಡು ಕುವೆಂಪು ಭಾಷಾ ಭಾರತಿಯಿಂದ ಪ್ರಕಟಗೊಂಡಿದೆ. ‘ತುಳುವರ ಮೂಲ ತಾಣ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’ ಕೃತಿ ತುಳು ನಾಡಿನ ನೆಲಮೂಲ ಜನರ ಮತ್ತು ಅವರ ಆರಾಧನೆ ಆಚರಣೆಗಳನ್ನು ಒಳಗೊಂಡಿದೆ. ಇವರ “ಮೂಲತಾಣದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಪಾಡ್ದನ” “ತುಳು ನಾಡಿನ ಗ್ರಾಮಾಡಳಿತ ಮತ್ತು ಅಜಲು” “ಚೇಳಾರು ಗುತ್ತು ಅಗೊಳಿ ಮಂಜನ್ನಾಯ್ಗೆರ್ – ಸಾಂಸ್ಕತಿಕ ಐತಿಹಾಸಿಕ ಶೋಧ”, “ತುಳುವೆರೆ ಅಟಿಲು ಅರಗಣೆ”. ‘ಸಿರಿಬಾರಿ ಲೋಕ ತುಳುನಾಡು”, ಈ ಎಲ್ಲಾ ಪ್ರಕಟಿತ ಕೃತಿಗಳು ತುಳುನಾಡಿನ ಚರಿತ್ರೆ ಮತ್ತು ಜಾನಪದ ಲೋಕಕ್ಕೆ ಸಂಬಂಧಿಸಿದ ಮೌಲಿಕ ಕೃತಿಗಳಾಗಿದೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಇವರ ಸೃಜನಶೀಲ ಹಾಗೂ ಸಂಶೋಧನಾತ್ಮಕ ಬರಹಗಳು ಪ್ರಕಟಗೊಂಡಿವೆ. ಅನ್ಯ ಭಾಷೆಗಳಿಗೂ ಭಾಷಾಂತರಗೊಂಡಿವೆ.

ಇವರ ಬರಹಗಳ ಬಗ್ಗೆ ವಿಚಾರ ಸಂಕಿರಣಗಳೂ ನಡೆದಿವೆ. ಕರ್ನಾಟಕದಾದ್ಯಂತ ಸಾಹಿತ್ಯ ಸಮ್ಮೇಳನಗಳಲ್ಲಿ, ಇನ್ನಿತರ ವೈಚಾರಿಕ ವೇದಿಕೆಗಳಲ್ಲಿ ಹತ್ತು ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಇಂದಿರಾ ಹೆಗ್ಡೆಯವರು ಬೆಂಗಳೂರಿನಲ್ಲಿ ಉದ್ಯಮಿಯಾಗಿಯೂ, ಪ್ರಮುಖ ಸಂಘಟಕಿಯಾಗಿಯೂ, ಸಮಾಜ ಸೇವಾಸಕ್ತೆಯಾಗಿಯೂ ಖ್ಯಾತರಾಗಿರುವವರು. ಬಡಮಕ್ಕಳ ವಿದ್ಯಾರ್ಜನೆಯ ಪೋಷಕಿಯಾಗಿಯೂ ಜನಮಾನ್ಯರಾದವರು. ಶಂ. ಭಾ ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷೆಯಾಗಿ, ಬೆಂಗಳೂರು ನಗರ ಜಿಲ್ಲಾ ಇತಿಹಾಸ ಅಕಾಡೆಮಿಯ ಅಧ್ಯಕ್ಷೆಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸಕ್ರಿಯರಾಗಿರುವವರು.

‘ವಸುದೇವ ಭೂಪಾಲಂ’ ಪ್ರಶಸ್ತಿ, ‘ಅಂಬರೀಶ ಪ್ರಶಸ್ತಿ’, ‘ಅತ್ತಿಮಬ್ಬೆ ಬಹುಮಾನ’, ‘ಅನಂತ ರಂಗ ಸಂಶೋಧನಾ ಪ್ರಶಸ್ತಿ’, ‘ಬೇಕಲ್ ಶಾಂತಾ ನಾಯಕ್ ಪ್ರಶಸ್ತಿ’, ‘ಸಾಹಿತ್ಯ ಕೌಸ್ತುಭ ಪ್ರಶಸ್ತಿ’, ‘ಬಲಿಯೇಂದ್ರ ಪ್ರಶಸ್ತಿ’, ‘ತುಳುನಾಡ್ದ ಸಿರಿ ಪ್ರಶಸ್ತಿ’ ಗಳೊಂದಿಗೆ 1915ರ ಸಾಲಿನ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಯನ್ನೂ ಪಡೆದಿರುವರು. ಸಾಹಿತ್ಯಕ್ಷೇತ್ರಕ್ಕೆ ಇವರ ಕೊಡುಗೆ ಹಾಗೂ ತುಳುನಾಡ ಇತಿಹಾಸ ಮತ್ತು ಸಾಂಸ್ಕತಿಕ ಅಧ್ಯಯನ ಮತ್ತು ಸಂಶೋಧನಾ ಕೃತಿ ರಚನೆಯ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2015 ರ ಸಾಲಿನ ಗೌರವ ಪ್ರಶಸ್ತಿ ನೀಡುತ್ತಿದೆ.

ಶ್ರೀ ಕೋಟಿ ಪರವ (ತುಳು ಜಾನಪದ ಕ್ಷೇತ್ರ) ಪುತ್ತೂರು ತಾಲೂಕಿನ ಮಾಡಾವು ನಿವಾಸಿಗಳಾದ ದೇವು ಪರವ ಮತ್ತು ಕೊರಪೊಳು ದಂಪತಿಗಳ ಐವರು ಗಂಡು ಮಕ್ಕಳ ಪೈಕಿ ಎರಡನೆಯವರೇ ಕೋಟಿ ಪರವ. ಇವರು ಬಾಲ್ಯದಿಂದಲೇ ತಮ್ಮ ಕುಲ ಕಸುಬಾದ ದೈವ ನರ್ತನ ಕಾಯಕದಲ್ಲಿ ಮನಸಾರೆ ತೊಡಗಿಸಿ ಕೊಂಡವರು. ಪ್ರಾಥಮಿಕ ಹಂತದಲ್ಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ಹನ್ನೆರಡನೇ ವಯಸ್ಸಿನಿಂದ ದೈವ ನರ್ತನದ ಕುಲ ಕಸುಬನ್ನು ಪ್ರಾಮಾಣಿಕತೆಯಿಂದ ಮುಂದುವರೆಸಿಕೊಂಡು ಬಂದ ಶ್ರೀ ಕೋಟಿ ಪರವ ಸಜ್ಜನಿಕೆಯನ್ನೇ ಆದರ್ಶವಾಗಿರಿಸಿಕೊಂಡವರು. ದೈವ ನರ್ತಕರಾಗಿ ‘ಉಳ್ಳಾಕುಲು ಮುಡಿತ್ತ ನೇಮ’ ವನ್ನು ಬಹಳ ಶ್ರದ್ಧಾ ಭಕ್ತಿಯಿಂದ, ನಿಷ್ಠೆಯಿಂದ ಮಾಡುತ್ತಾ ಬಂದಿರುವವರು. ಉಳ್ಳಾಕುಳ ಸಿರಿಮುಡಿಯನ್ನು ಹೊತ್ತು ನಡೆಸುವ ಒಲಸರಿ, ಬಂಡಿಮೇಲೆ ಕುಳಿತು ಸವಾರಿ, ಆಕರ್ಷಕ ನುಡಿ ಕಟ್ಟು ಇತ್ಯಾದಿಗಳಲ್ಲಿ ಕೋಟಿ ಪರವರ ಪರಿಣತಿ ಸಾಟಿಯಿಲ್ಲದ್ದು. ಇವರ ಈ ದೈವ ನರ್ತನ ಭಕ್ತ ವೃಂದ ಮೆಚ್ಚುವಂತಹದು. ಈ ಕಲಾ ಪರಿಣತಿಗೆ ನಾಡೋಜ ಜಿ. ನಾರಾಯಣರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು 2009ರಲ್ಲಿ ಬೆಂಗಳೂರಿನಲ್ಲಿ ‘ಜನಪದ ಲೋಕ ಪ್ರಶಸ್ತಿ’ಯನ್ನು ನೀಡಿದೆ. ದಕಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕುಗಳಲ್ಲೂ ಇವರು ದೈವ ಸೇವೆ ಸಲ್ಲಿಸಿದ್ದಾರೆ. ಉಳ್ಳಾಕುಲು ದೈವ, ಅಣ್ಣಪ್ಪ-ಪಂಜುರ್ಲಿ, ರಕ್ತೇಶ್ವರಿ, ರುದ್ರ ಚಾಮುಂಡಿ, ದುಗ್ಗಲಾಯ, ಕೊಡಮಣಿತ್ತಾಯ, ಮೈಸಂದಾಯ, ಮಲರಾಯ, ಜುಮಾದಿ, ಸತ್ಯದೇವತೆ, ಹೊಸಮ್ಮ ದೈವಗಳ ಸೇವೆಯಲ್ಲದೆ ಬ್ರಹ್ಮ ಬೈದರ್ಕಳ ಗರಡಿಗಳಲ್ಲಿ, ಹತ್ತು ಹಲವು ದೇವಸ್ಥಾನಗಳಲ್ಲಿ ವಿವಿಧ ದೈವಗಳ ಸೇವೆಯನ್ನು ಮಾಡಿರುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ-2000, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ-2006. ಕರ್ನಾಟಕ ಜಾನಪದ ಲೋಕ ಪ್ರಶಸ್ತಿ-2009 ಗಳೊಂದಿಗೆ ನಾಡಿನ ಹಲವಾರು ಸಂಘಟನೆಗಳಿಂದ ಸನ್ಮಾನಿತರಾದ ಶ್ರೀ ಕೋಟಿ ಪರವ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2015ರ ಸಾಲಿನ ಗೌರವ ಪ್ರಶಸ್ತಿ ನೀಡುತ್ತಿದೆ.

ಶ್ರೀ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ ಕ್ಷೇತ್ರ) ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತನಡ್ಕದಲ್ಲಿ ತಂದೆ ಮುತ್ತ ಮೂಲ್ಯ ಮತ್ತು ತಾಯಿ ಅಬ್ಬು ರವರಿಗೆ 1943ನೇ ಇಸವಿಯಲ್ಲಿ ಜನಿಸಿದ ಕುಂಞ ಕುಲಾಲರು ವಿದ್ಯಾಭ್ಯಾಸವನ್ನು 5ನೇ ತರಗತಿಗೆ ನಿಲ್ಲಿಸಿ ಯಕ್ಷಗಾನ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು. ಆರಂಭದಲ್ಲಿ ಕುರಿಯ ವಿಠಲ ಶಾಸ್ತ್ರಿಯವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ಶ್ರೀ ಧರ್ಮಸ್ಥಳ ಮೇಳದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಸ ತೊಡಗಿದರು. ಖ್ಯಾತ ವೇಷಧಾರಿ ದಿ. ಸಣ್ಣ ತಿಮ್ಮಪ್ಪನವರಿಂದ ಪರಂಪರೆಯ ಕುಣಿತದಲ್ಲಿ ತಜ್ಞತೆಯನ್ನು ಗಳಿಸಿದರು. ಮುಲ್ಕಿ, ಕುತ್ಯಾಲ, ಸೌಕೂರು, ಇರಾ, ಕೊಲ್ಲೂರು, ಆದಿಸುಬ್ರಹ್ಮಣ್ಯ ಮೇಳಗಳಲ್ಲಿ ಹತ್ತಾರು ವರ್ಷಗಳ ಕಲಾ ಸೇವೆಯನ್ನು ಸಲ್ಲಿಸುತ್ತಾ ಹೆಸರಾಂತ ಕಲಾವಿದರೊಂದಿಗೆ ಅಭಿನಯಿಸಿದರು. ಶ್ರೀ ಅನ್ನಪೂರ್ಣೇಶ್ವರಿ ದಶಾವತಾರ ಮೇಳದಲ್ಲೂ ಹಲವಾರು ವರ್ಷ ಪ್ರಧಾನ ವೇಷಧಾರಿಯಾಗಿ ಮೆರೆದರು. ದೇವೇಂದ್ರ, ಅರ್ಜುನ, ಹಿರಾಣ್ಯಕ್ಷ, ಕೌಂಡ್ಲಿಕ, ಇಂದ್ರಜೀತ್ ಇಂತಹ ಪೌರಾಣಿಕ ಪಾತ್ರಗಳಲ್ಲದೆ, ಬುದಬಾರೆ, ಚೆನ್ನಯ್ಯ, ದುಗ್ಗಣ ಕೊಂಡೆ ಯಂತಹ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು. ತುಳು ಪ್ರಸಂಗಗಳಲ್ಲಿ ಇವರದ್ದು ಅಮೋಘ ಅಭಿನಯ. ಸುಮಾರು ಅರ್ಧ 50 ವರ್ಷಗಳಿಗಿಂತಲೂ ಹೆಚ್ಚು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪುವಿನಿಂದ ಮೆರೆದ ಈ ಸಾಧಕರಾದ ಶ್ರೀ ಬೇತ ಕುಂಞ ಕುಲಾಲ್ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2015ರ ಸಾಲಿನ ಗೌರವ ಪ್ರಶಸ್ತಿ ನೀಡುತ್ತಿದೆ.

2015ನೇ ಸಾಲಿನ ಪುಸ್ತಕ ಬಹುಮಾನ ವಿಜೇತರು
ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ : ತುಳುಭಾಷೆಯಲ್ಲಿ ಉತ್ತಮ ಕಥೆ, ಕವನಗಳನ್ನು ಬರೆಯುವ ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ ಇವರ ‘ಗುತ್ತುದಿಲ್ಲದ ಜಾಲ್‍ಡ್’ ತುಳು ಕಥಾಸಂಕಲನಕ್ಕೆ 2015 ರ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ‘ಉಡಲ್ದ ಸಿರಿ’, ‘ಲೆಲೇ ಲೈಸ’ ದಂತಹ ತುಳು ಮೌಲಿಕ ಕೃತಿಗಳನ್ನು ಪ್ರಕಟಿಸಿದ ಲೇಖಕಿಯ ಈ ಕಥಾ ಸಂಕಲನದಲ್ಲಿ ತುಳುವರ ಬದುಕಿನ ಸ್ಥಿತಿಗತಿ, ರೀತಿ ರಿವಾಜು ಮತ್ತು ಕಟ್ಟುಕಟ್ಟಲೆಗಳು, ಕುಟುಂಬದೊಳಗಿನ ಒಡಕುಗಳ ಪರಿಣಾಮ ಪ್ರಭಾವಗಳು ಮನನೀಯವಾಗಿ ಚಿತ್ರಿತವಾಗಿವೆ. ಪ್ರಚಲಿತವಾದ ಹತ್ತು ಹಲವು ಸಾಮಾಜಿಕ ಸಮಸ್ಯೆಗಳ ಕಡೆಗೂ ಈ ಕಥೆಗಳಲ್ಲಿ ಲೇಖಕಿಯ ಚಿಂತನೆ ಹರಡಿ ಕೊಂಡಿದೆ.

ಶ್ರೀ ಶಿಮಂತೂರು ಚಂದ್ರಹಾಸ ಸುವರ್ಣ : ತುಳು ಸಂಸ್ಕೃತಿ ಅರಿವಿರುವ ಸುವರ್ಣರು ನಾಟಕ ಬರೆಯುವ ಕಲೆಯನ್ನು ಚೆನ್ನಾಗಿ ಬಲ್ಲಂತಹ ಶಿಮಂತೂರು ಚಂದ್ರಹಾಸ ಸುವರ್ಣರು ನಾಟಕ ರಚನಾ ಕಾಯಕವನ್ನು ಗಂಭೀರವಾದ ಸಾಮಾಜಿಕ ಜವಾಬ್ದಾರಿ ಎಂದು ತಿಳಿದವರು. ತುಳು ಭಾಷೆಯ ಮೇಲೂ ಹಿಡಿತವಿರುವ ಮತ್ತು ತುಳು ಸಂಸ್ಕೃತಿಯ ಸ್ಪಷ್ಟ ಅರಿವಿರುವ ಇವರು ಬರೆದ ಹೆಚ್ಚಿನ ಕೃತಿಗಳು ಬಹುಮಾನ ವಿಜೇತವಾಗಿವೆ. ‘ಗಾಲ’ ನಾಟಕವು ಪ್ರಖರ ಸಾಮಾಜಿಕ ಕಾಳಜಿಯಿಂದ ಕೂಡಿದ ಕೃತಿಯಾಗಿದ್ದು ಗಂಡು ಹೆಣ್ಣೆನ ನಡುವಿನ ವಿರಸ, ಸಮರಸ ಮತ್ತು ರಾಜಕೀಯದ ವಿಡಂಬನೆಯನ್ನು ಒಳಗೊಂಡಿದೆ. ನಾಟಕದ ಭಾಷೆಯು ಸತ್ವ ಭರಿತವಾಗಿದೆ.

ಶ್ರೀ ಪಿ. ಚೆನ್ನಪ್ಪ ಅಳಿಕೆ : ಶ್ರೀ ಚೆನ್ನಪ್ಪ ಅಳಿಕೆಯವರು ತುಳು ಭಾಷೆಯ ಪ್ರಮುಖ ಕವಿಗಳಲ್ಲಿ ಒಬ್ಬರು. ಮೂವತ್ತೊಂಬತ್ತು ಕವನಗಳನ್ನೊಳಗೊಂಡ ‘ಬೂಳ್ಯ’ ಸಂಕಲನವು ಅವರ ಪ್ರಥಮ ಪ್ರಕಟಿತ ಕೃತಿ. ತುಳು ಸಂಸ್ಕೃತಿಯ ತಿರುಳು ಮರೆಯಾಗುತ್ತಿರುವ ಬಗ್ಗೆ ಬೇಗುದಿಯನ್ನೊಳಗೊಂಡಂತಿರುವ ಈ ಕವನಗಳ ಒಟ್ಟು ಆಶಯ ತುಳು ಸಂಸ್ಕೃತಿಯನ್ನು ಉಳಿಸಿಕೊಳ್ಳ ಬೇಕೆನ್ನುವುದೇ ಆಗಿದೆ. ರಾಗ ಸಂಯೋಜನೆಗೂ ಒಗ್ಗುವ ಈ ಕವಿತೆಗಳಲ್ಲಿ ತುಳು ಭಾಷೆಯ ಸೊಗಸು, ಶಬ್ದ ಸಂಪತ್ತು ಎದ್ದು ಕಾಣುವಂತಿದೆ. ತುಳು ನುಡಿಕಟ್ಟುಗಳು ಸಾಂಕೇತಿಕ ಅರ್ಥದಲ್ಲಿ ಯಶಸ್ವಿಯಾಗಿ ಬಳಕೆಯಾಗಿವೆ. ಲೇಖಕರ ಕಾವ್ಯಶಕ್ತಿ, ಸಂಸ್ಕೃತಿ ಪ್ರೇಮ, ಜೀವನ ಪ್ರೀತಿಯನ್ನು ಹಾಡಾಗಿಸುವ ಬಗೆ ಗಣನೀಯ. ಪ್ರ್ರಾಸ ಒಳಪ್ರಾಸಗಳುಳ್ಳ ಕವನಗಳು ಮನಮುಟ್ಟುವಂತಿವೆ.


Spread the love