ತೆಂಕನಿಡಿಯೂರಿನಲ್ಲಿ 50ಕ್ಕೂ ಅಧಿಕ ಬಿಜೆಪಿ, ಜೆಡಿಎಸ್ ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಮತ್ತು ಉಡುಪಿ ವಿಧಾನಸಭಾ ವ್ಯಾಪ್ತಿಯ ಸುಮಾರು 50 ಕ್ಕೂ ಅಧಿಕ ಬಿಜೆಪಿ ಮತ್ತು ಜೆಡಿಎಸ್ ಯುವ ಕಾರ್ಯಕರ್ತರು ಬುಧವಾರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿಯವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಜೆಡಿಎಸ್ ಪಕ್ಷದ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಅನೂಪ್ ಶೆಟ್ಟಿ ಬೆಳ್ಕಲೆ, ಗುರುಪ್ರಸಾದ್ ಹಾಗೂ ಬಿಜೆಪಿ ಯುವ ನಾಯಕ ರಾಘುವ ಶೆಟ್ಟಿ ಪಯ್ಯಾರ್ ನೇತೃತ್ವದಲ್ಲಿ 50 ಕ್ಕೂ ಅಧಿಕ ಯುವ ಕಾರ್ಯಕರ್ತರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಪಕ್ಷದ ಧ್ವಜ ನೀಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ವಿಶ್ವಾಸವಿಟ್ಟು ಬಂದಿರುವ ಕಾರ್ಯಕರ್ತರಿಗೆ ಯಾವುದೇ ರೀತಿಯಲ್ಲೂ ಸಹ ನೋವಾಗದಂತೆ ಅವರುಗಳ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಖಚಿತವಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಂದ ಕಾರ್ಯಕರ್ತರಿಗೆ ಸೂಕ್ತ ರೀತಿಯ ಸ್ಥಾನಮಾನ ನೀಡುವುದಾಗಿ ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಧನಂಜಯ ಕುಂದರ್, ಶಶಿಕಾಂತ್, ಸುರೇಶ್ ಕುಮಾರ್, ಸೂರಜ್, ಪ್ರಕಾಶ್ ಆಚಾರ್ಯ, ದಿನೇಶ್ ಪೂಜಾರಿ, ಶಶಿಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.