ತೆಂಕನಿಡಿಯೂರು ಸರಕಾರಿ ಪ್ರೌಢಶಾಲಾ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟನೆ
ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲಾ ಸುವರ್ಣ ಮಹೋತ್ಸವ ಮತ್ತು ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಆರ್ ಎಂಎಸ್ಎ ವತಿಯಿಂದ ನಿರ್ಮಾಣಗೊಂಡ ಕಟ್ಟಡವನ್ನು ಶನಿವಾರ ಉದ್ಘಾಟನೆಗೊಂಡಿತು.
ನೂತನ ಕಟ್ಟಡವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿ ತೆಂಕನಿಡಿಯೂರು ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿನ ಪ್ರಥಮ ದರ್ಜೆ ಕಾಲೇಜನ್ನು ಯೂನಿವರ್ಸಿಟಿ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈಗಾಗಲೇ ಸುಮಾರು 6 ಕೋಟಿ ರೂ ಅನುದಾನದೊಂದಿಗೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಮುಂದೆ ಇಲ್ಲಿನ ಶಾಲಾ ಮತ್ತು ಕಾಲೇಜಿನ ಬೇಡಿಕೆ ಇದ್ದಲ್ಲಿ ಶಿಕ್ಷಣ ಇಲಾಖೆಯಿಂದ ಗರಿಷ್ಠ ಮಟ್ಟದ ಅನುದಾನ ತರಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಆಶೀರ್ವಚನ ನೀಡಿದ ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಎಲ್ಲಾ ಧರ್ಮಿಯರು ಒಗ್ಗಟ್ಟಾಗಿ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಬದುಕಿದಾಗ ಭವ್ಯ ಭಾರತ ನಿರ್ಮಾಣವಾದಾಗ ಬೇಕು ಎಂದರು.
k
ಇನ್ನೋರ್ವ ಮುಖ್ಯ ಅತಿಥಿ ತೊಟ್ಟಂ ಸಂತ ಅನ್ನಾ ಚರ್ಚ್ ಧರ್ಮಗುರು ವಂ ಫ್ರಾನ್ಸಿಸ್ ಕರ್ನೆಲಿಯೋ ಆಶೀರ್ವಚನ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ನೈಜ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅರಳಿಸುವ ಕೆಲಸ ಮಾಡಬೇಕು ಎಂದರು.
ಮಲ್ಪೆ ಸೈಯದಿನ ಅಬೂಬಕ್ಕರ್ ಸಿದ್ದಿಕ್ ಜಾಮೀಯಾ ಮಸೀದಿ ಧರ್ಮಗುರು ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿದರು. ಸಚಿವ ಪ್ರಮೋದ್ ಮಧ್ವರಾಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಜಯಕುಮಾರ್ ಬೆಳ್ಕಳೆ, ಯುಪಿಸಿಎಲ್ ನ ಕಿಶೋರ್ ಆಳ್ವಾ, ಡಿಡಿಪಿಯು ಆರ್ ಬಿ ನಾಯಕ್, ಬ್ರಹ್ಮಾವರ ಬಿಇಒ ನಾಗೇಶ್ ಶ್ಯಾನುಭಾಗ್, ತೊಟ್ಟಂ ಸಮಾಜ ಸೇವಕ ಪ್ರಭಾಕರ ಪೂಜಾರಿ, ತೆಂಕನಿಡಯೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ, ಪ್ರೋ ಬಾಲಕೃಷ್ಣ ಹೆಗ್ಡೆ, ತಾಪಂ ಸದಸ್ಯ ಧನಂಜಯ ಕುಮಾರ್, ಉದ್ಯಮಿ ದನಂಜಯ ಶೆಟ್ಟಿ ಕೊಜಕೊಳಿ, ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್, ಎಸ್ ಡಿ ಎಂ ಸಿ ಉಪಾಧ್ಯಕ್ಷ ಸತೀಶ್ ನಾಯ್ಕ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಾನಿ ಶಂಕರ್ ಲಾಡ್, ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಧಾರವಾಡ ಉಪಸ್ಥಿತರಿದ್ದರು.
ಪ್ರೌಢಶಾಲಾ ಹಿರಿಯ ಸಹಶಿಕ್ಷಕ ಜಯಪ್ರಕಾಶ್ ನಾಯಕ್ ಪ್ರೌಢ ಶಾಲಾ ವರದಿ, ಕಾಲೇಜಿನ ಪ್ರಾಂಶುಪಾಲ ಡಾ ಸಿದ್ದೇಶ್ವರಪ್ಪ ಕಾಲೇಜಿನ ವರದಿ ವಾಚಿಸಿದರು. ಶಾಲಾ ಸುವರ್ಣ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಬಡಾಮನೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು.