ತೆಂಗಿನ ಮರಗಳಿಗೆ ಹುಳ ಬಾಧೆ: ಬೆಳೆಗಾರರಿಗೆ ಪುನಶ್ಚೇತನ ಪ್ಯಾಕೇಜ್
ಮ0ಗಳೂರು: ಮಂಗಳೂರು ತಾಲೂಕಿನ ಉಳ್ಳಾಲ ಸುತ್ತಮುತ್ತ ತೆಂಗಿನ ಮರಗಳಲ್ಲಿ ಕಪ್ಪು ಹುಳ ಬಾಧೆ ನಿಯಂತ್ರಣಕ್ಕೆ ಈಗಾಗಲೇ ವೈಜ್ಞಾನಿಕ ಕ್ರಮಗಳನ್ನು ನಡೆಸಲಾಗುತ್ತಿದೆ. ತೀವ್ರ ಹುಳ ಪೀಡಿತವಾಗಿರುವ ಮರಗಳನ್ನು ತೆಗೆದು, ಹೊಸದಾಗಿ ತೆಂಗಿನ ಗಿಡ ನೆಡಲು ರೈತರಿಗೆ ತೋಟಗಾರಿಕೆ ಇಲಾಖೆಯು ಪುನಶ್ಚೇತನ ಪ್ಯಾಕೇಜ್ ಜಾರಿಗೊಳಿಸಿದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೋಮವಾaರ ಕಲ್ಲಾಪು ಪರಿಸರದಲ್ಲಿ ಕಪ್ಪು ಹುಳ ಪೀಡಿತ ತೆಂಗಿನ ತೋಟದಲ್ಲಿ ನಡೆದ ಹುಳಬಾಧೆ ನಿಯಂತ್ರಣ ಕುರಿತು ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪುನಶ್ಚೇತನ ಪ್ಯಾಕೇಜ್ ಅನ್ವಯ 1 ತೆಂಗಿನ ಮರಕ್ಕೆ 1000 ರೂ.ಗಳಂತೆ ಒಂದು ಹೆಕ್ಟೇರ್ ಜಮೀನಿಗೆ ಗರಿಷ್ಠ ರೂ. 44750 ಪರಿಹಾರವನ್ನು ತೆಂಗಿನ ಮರಗಳ ಪುನಶ್ಚೇತನಕ್ಕೆ ಇಲಾಖೆ ನೀಡಲಿದೆ. ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂಡಿ ಹಾನಿಗೀಡಾಗಿರುವ ಹುಳ ಬಾಧೆಯಿಂದ ಹಾನಿಗೀಡಾಗಿರುವ ಮರ ಮತ್ತು ತೋಟಗಳ ಜಂಟೀ ಸಮೀಕ್ಷೆ ಕಾರ್ಯವನ್ನು ಶೀಘ್ರದಲ್ಲೇ ನಡೆಸಲಾಗುವುದು ಅಂದಾಜು 100 ಹೆಕ್ಟೇರ್ ಜಮೀನಿನಲ್ಲಿ ತೆಂಗಿನ ಮರಗಳಿಗೆ ಕಪ್ಪು ಹುಳ ಬಾಧೆಗೀಡಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ನಿಖರವಾಗಿ ಅಂದಾಜಿಸಲು ಜಂಟೀ ಸಮೀಕ್ಷೆ ನಡೆಸಲಾಗುತ್ತಿದ್ದು, ಈ ವಾರದಲ್ಲೇ ಸಮೀಕ್ಷೆ ಆರಂಭವಾಗಲಿದೆ ಎಂದು ಅವರು ಹೇಳಿದರು.
ತೆಂಗಿನ ಮರಗಳಿಗೆ ಕಪ್ಪು ಹುಳ ಬಾಧೆ ನಿಯಂತ್ರಿಸಲು ಮರಗಳಿಗೆ ವೈಜ್ಞಾನಿಕವಾಗಿ ಸಂಶೋಧಿಸಿದ ಪರೋಪ ಜೀವಿಗಳನ್ನು ಬಿಡಲಾಗುತ್ತಿದೆ. ಪ್ರತೀ 15 ದಿನಗಳಿಗೊಮ್ಮೆ ಪರೋಪ ಜೀವಿಗಳನ್ನು ತೆಂಗಿನ ಮರಕ್ಕೆ ಬಿಡುವುದರಿಂದ ಕಪ್ಪುಹುಳ ಬಾಧೆ ನಿಯಂತ್ರಣವಾಗಲಿದೆ. ತೋಟಗಾರಿಕೆ ಇಲಾಖೆಯು ಬೆಳೆಗಾರರಿಗೆ ಪರೋಪ ಜೀವಿಯನ್ನು ಒದಗಿಸಲಿದೆ. ಈ ನಿಟ್ಟಿನಲ್ಲಿ ಸುಮಾರು 20ಲಕ್ಷ ಪರೋಪಕಾರಿ ಜೀವಿ ಅಗತ್ಯವಿದ್ದು, ಈ ಪೈಕಿ ತುಂಬೆಯಲ್ಲಿರುವ ತೋಟಗಾರಿಕೆ ಇಲಾಖೆಯ ಘಟಕದಲ್ಲಿ 12ಲಕ್ಷ ಜೀವಿಗಳನ್ನು ಉತ್ಪಾದಿಸಲಾಗುವುದು. ಉಳಿದ ಜೀವಿಗಳನ್ನು ಹೊರಜಿಲ್ಲೆಗಳಿಂದ ತರಿಸಲಾಗುವುದು ಎಂದು ಸೀಮಾ ತಿಳಿಸಿದರು.
ಬೆಳೆಗಾರರು ತೆಂಗಿನ ಮರಗಳಿಗೆ ಸೂಕ್ತ ನಿರ್ವಹಣಾ ಪದ್ದತಿ ಅನುಸರಿಸಿದರೆ ಕೀಟಬಾಧೆ ಕಡಿಮೆಯಾಗಲಿದೆ. ಮುಖ್ಯವಾಗಿ ಹುಳಬಾಧೆಗೀಡಾಗಿರುವ ತೆಂಗಿನ ಗರಿಗಳನ್ನು ಹಾಗೆಯೇ ಬಿಡದೆ ಸುಟ್ಟು ನಾಶ ಮಾಡಬೇಕು. ಗರಿಗಳನ್ನು ಸುಡದೆ ಸಂಗ್ರಹಿಸಿಟ್ಟರೆ, ಕೀಟಬಾಧೆ ಇನ್ನಷ್ಟು ಅಧಿಕವಾಗಲಿದೆ. ತೆಂಗಿನ ಗಿಡಗಳಿಗೆ ಗೊಬ್ಬರ ನಿರ್ವಹಣೆ ಹಾಗೂ ಸಾವಯವ ಹೊದಿಕೆಯಿಂದ ನಿಯಂತ್ರಣವಾಗಲಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಸಹಕಾರ ಅಗತ್ಯವಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ, ಇಲ್ಲಿನ ತೆಂಗಿನ ಮರಗಳಿಗೆ ಕಪ್ಪುಹುಳ ನಿಯಂತ್ರಣಕ್ಕೆ ಪರೋಪ ಜೀವಿಗಳನ್ನು ಬಿಡಲಾಯಿತು. ಕಾರ್ಯಕ್ರಮದಲ್ಲಿ ತೆಂಗಿನ ಬೆಳೆಗಾರರು, ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.