ತೈಲ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿ ವಿಫಲ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ
ಉಡುಪಿ: ಕೇಂದ್ರ ಸರ್ಕಾರ ದಿನೇ ದಿನೇ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊದರೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಪು ಬ್ಲಾಕ್ಯುವ ಕಾಂಗ್ರೆಸ್ ಖಂಡಿಸಿದೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ಡಿಸೋಜ ರವರು ನರೇಂದ್ರ ಮೋದಿಯವರು ಪ್ರಧಾನಿಯಾದಾಗ “ಅಚ್ಚೇ ದಿನ್” ತರುವುದಾಗಿ ಹೇಳಿದ್ದರು. ಅವರು ಪ್ರಧಾನಿಯಾಗಿ 3 ವರ್ಷವಾದರೂ ಜನರಿಗೆ ಅಚ್ಚೇ ದಿನ್ ಬರುವ ಲಕ್ಷಣಗಳು ಕಾಣುತ್ತಿಲ್ಲ. ಬದಲಿಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸರಕು ಸಾಗಾಣಿಕೆಯೂ ದುಬಾರಿಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ದೈನಂದಿನ ಜೀವನಕಷ್ಟವಾಗುತ್ತಿದೆ.
ಇತ್ತೀಚಿಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆಯ ಸಹಾಯಕ ಸಚಿವರು ಕಾರು ಮತ್ತು ಬೈಕ್ ಇರುವವರು ಹಸಿವಿನಿಂದ ಸಾಯುವುದಿಲ್ಲ, ಅವರು ಶ್ರೀಮಂತರು, ಹಾಗಾಗಿ ಅವರು ಪೇಟ್ರೊಲ್ ಹಾಗೂ ಡಿಸೇಲ್ನ ಮೇಲೆ ಹೆಚ್ಚುವರಿ ತೆರಿಗೆ ಕಟ್ಟಲಿ ಎಂದು ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟದಿಂದ ಬಂದ ಹಣವನ್ನು ಅಭಿವೃದ್ದಿ ಕಾರ್ಯಗಳಿಗೆ ಉಪಯೋಗಿಸುವುದಾಗಿ ಸಚಿವರು ಹೇಳಿಕೆಯನ್ನು ನೀಡಿದ್ದಾರೆ. ಸಚಿವರು ಪೆಟ್ರೋಲ್ ಮತ್ತುಡಿಸೇಲ್ ಬೆಲೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಈ ರೀತಿ ಅಸಂಬದ್ಧ ಹಾಗೂ ಅಹಂಕಾರದ ಮಾತುಗಳನ್ನು ಆಡಿರುವುದು ಖಂಡನೀಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಸಿದಂತೆ ನಮ್ಮ ದೇಶದಲ್ಲಿಯೂ ಇಳಿಸಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿ ಅಭಿವೃದ್ಧಿ ಹೆಸರಿನಲ್ಲಿ ಜನ ಸಾಮಾನ್ಯರನ್ನು ಶೋಷಣೆ ಮಾಡುವುದನ್ನು ನಿಲ್ಲಿಸಬೇಕೆಂದು ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.