ತೋಟಬೆಂಗ್ರೆಯಲ್ಲಿ ಬಾಗಲಕೋಟೆ ಮೂಲದ ಯುವಕನ ಕೊಲೆ ಆರೋಪಿ ಬಂಧನ
ಮಂಗಳೂರು: ತೋಟಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲದ 19 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾವರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಭಾಗಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ: 21-09-2024 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲದ 19 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾವರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣದ ಪಿರ್ಯಾದುದಾರರಾದ ಹನುಮಂತ ದುರುಗಪ್ಪ ವಡ್ಡರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:09/2024 ಕಲಂ 103 (1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಕರಣದಲ್ಲಿ ಆರೋಪಿ ಪತ್ತೆ ಕಾರ್ಯದಲ್ಲಿರುವಾಗ ಖಚಿತ ಮಾಹಿತಿ ಮೇರೆಗೆ ಪ್ರಕರಣದ ಆರೋಪಿ ಧರ್ಮರಾಜ್ ಸುವರ್ಣ ಪ್ರಾಯ 50 ವರ್ಷ, ತಂದೆ: ಭಾಸ್ಕರ್ ಮೆಂಡನ್ ವಾಸ: ತೋಟಾ ಬೆಂಗ್ರೆ, ಮಂಗಳೂರು ತಾಲೂಕು ಎಂಬಾತನನ್ನು ಈ ದಿನ ದಿನಾಂಕ:26-09-2024 ರಂದು ಬೆಳಗಿನ ಜಾವ 03.00 ಗಂಟೆಗೆ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಪ್ರಕರಣದ ತನಿಖೆಯು ಮುಂದುವರೆದಿರುತ್ತದೆ. ಆರೋಪಿಯು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸಮಾಡಿಕೊಂಡಿರುತ್ತಾನೆ.
ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಮುದುಕಪ್ಪ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯದವರಾಗಿದ್ದು, ಇತ್ತೀಚೆಗೆ ಆರೋಪಿಯ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್ ನ್ನು ಮೃತ ಮುತ್ತು ಬಸವಾರಾಜ್ ತೆಗೆದುಕೊಂಡು ವಾಪಾಸ್ ನೀಡದೆ ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ ಆರೋಪಿಯು ಮುತ್ತು ಬಸವರಾಜ ವಡ್ಡರ್ @ ಮುದುಕಪ್ಪನನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿರುವುದಾಗಿದೆ.
ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇಧಿಸುವಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ ಐ.ಪಿ.ಎಸ್. ರವರ ಮಾರ್ಗದರ್ಶನದಂತೆ. ಮಾನ್ಯರಾದ ಶ್ರೀ ಸಿದ್ದಾರ್ಥ ಗೋಯಲ್, ಐ.ಪಿ.ಎಸ್. ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ), ಶ್ರೀ ಬಿ.ಪಿ ದಿನೇಶ್ ಕುಮಾರ್ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ ವಿಭಾಗ), ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀಕಾಂತ.ಕೆ.ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಉಪ ನಿರೀಕ್ಷಕರುಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ, ಶ್ರೀ ಜ್ಞಾನಶೇಖರ ಹಾಗೂ ಎ.ಎಸ್.ಐ.ರವರುಗಳಾದ ಕೃಷ್ಣ, ಬಿ.ಕೆ. ಶ್ರೀಮತಿ ನಯನಾ ಹಾಗೂ ಸಿಬ್ಬಂದಿಗಳಾದ ಸಿ. ಹೆಚ್.ಸಿ.ಗಳಾದ ಸತೀಶ್ ಎಮ್ ಆರ್, ಸಯ್ಯದ್ ಇಂತಿಯಾಜ್, ಪ್ರೇಮಾನಂದ, ನವೀನ್ ಚಂದ್ರ, ಜೇಮ್ಸ್.ಪಿ.ಜಿ, ಸಿಪಿಸಿ ಗಳಾದ ಶಶಿಕುಮಾರ್, ರಾಕೇಶ್, ಮಾಣಿಕ್, ಸೋಮ್ಹಾ ನಾಯ್ಕ ಹಾಗೂ ಚಾಲಕ ಅಂಬಣ್ಣರವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.