ತ್ರಾಸಿ ದುರಂತದಲ್ಲಿ ಮೃತಪಟ್ಟ ಮಕ್ಕಳಿಗೆ ದುಃಖತಪ್ತ ವಿದಾಯ
ಕುಂದಾಪುರ: ತ್ರಾಸಿಯ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲಾ ವ್ಯಾನ್ ದುರಂತದಲ್ಲಿ ಮೃತಪಟ್ಟ ಮಕ್ಕಳ ಅಂತ್ಯ ಸಂಸ್ಕಾರ ಗುರುವಾರ ಗಂಗೊಳ್ಳಿ ಹಾಗೂ ತಲ್ಲೂರು ಚರ್ಚುಗಳಲ್ಲಿ ಜರುಗಿತು.
ಅಫಘಾತದಲ್ಲಿ ಸಾವನಪ್ಪಿದ ಮುವತ್ತುಮುಡಿಯ ಸ್ಟೀವನ್ ಒಲಿವೇರಾ ಮಕ್ಕಳಾದ ಕೆಲಿಸ್ತಾ ಮತ್ತು ಕ್ಲಾರಿಶಾ ಹಾಗೂ ಆಲ್ವಿನ್ ಒಲಿವೇರಾ ಅವರ ಮಕ್ಕಳಾದ ಅನ್ಸಿಟಾ ಮತ್ತು ಅಲ್ವಿಟಾ, ವಿನೋದ್ ಡಯಾಸ್ ಮತ್ತು ಡೆಫ್ನಿ ಅವರ ಪುತ್ರ ಡೆಲ್ವಿನ್ ಡಯಾಸ್ ಅವರ ಅಂತ್ಯ ಸಂಸ್ಕಾರಗಳು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚಿನಲ್ಲಿ ಬೆಳಿಗ್ಗೆ ಜರುಗಿದರೆ, ಹೆಮ್ಮಾಡಿಯ ಆಲ್ವಿನ್ ಮತ್ತು ಮರೀನಾ ಡಿಸಿಲ್ವಾರ ಮಕ್ಕಳಾದ ನಿಕಿತಾ ಮತ್ತು ಅನ್ಯನ್ಯ ಡಿ’ಸಿಲ್ವಾ ಹಾಗೂ ವಿನೋದ್ ಶಾಂತಿ ಲೋಬೊರ ಪುತ್ರ ರೋಯ್‍ಸ್ಟನ್ ಲೋಬೊ ಅವರ ಅಂತ್ಯ ಸಂಸ್ಕಾರ ತಲ್ಲೂರು ಸಂತ ಫ್ರಾನ್ಸಿಸ್ ಆಸಿಸಿ ಚರ್ಚಿನಲ್ಲಿ ಸಂಜೆ ಜರುಗಿತು.
ಎರಡು ಚರ್ಚುಗಳಲ್ಲಿ ಅಂತಿಮ ಸಂಸ್ಕಾರದ ಪವಿತ್ರ ಬಲಿಪೂಜೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ನೇರವೇರಿಸಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸಿದರು. ಗಂಗೊಳ್ಳಿಯಲ್ಲಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ ಅನಿಲ್ ಡಿ’ಸೋಜಾ ಅವರು ತಮ್ಮ ಪ್ರವಚನದಲ್ಲಿ ಮೃತ ಕಂದಮ್ಮಗಳಿಗೆ ಬಾಷ್ಪಾಂಜಲಿಯನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಧರ್ಮಾಧ್ಯಕ್ಷರು ಮೃತ ಮಕ್ಕಳಿಗೆ ಹೂಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಗಂಗೊಳ್ಳಿ ಚರ್ಚಿನ ಪರವಾಗಿ ಚರ್ಚಿನ ಧರ್ಮಗುರು ವಂ ಆಲ್ಬರ್ಟ್ ಕ್ರಾಸ್ತಾ, ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ ಶೃದ್ಧಾಂಜಲಿ ಸಮರ್ಪಿಸಿದರು. ತಲ್ಲೂರು ಚರ್ಚಿನಲ್ಲಿ ಧರ್ಮಗುರು ವಂ ಜೋನ್ ವಾಲ್ಟರ್ ಮೆಂಡೊನ್ಸಾ, ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ ಮೃತ ಕಂದಮ್ಮಗಳಿಗೆ ಶ್ರದ್ಧಾಂಜಲ್ಲಿ ಸಮರ್ಪಿಸಿದರು. 5000 ಕ್ಕೂ ಅಧಿಕ ಸಾರ್ವಜನಿಕರು ಮಕ್ಕಳು, ವಿವಿಧ ವಲಯಗಳ ಧರ್ಮಗುರುಗಳು ಮೃತ ಮಕ್ಕಳ ಅಂತಿಮ ದರ್ಶನವನ್ನು ಪಡೆದರು.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಸದಸ್ಯ ಉದಯಕುಮಾರ್ ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ರೊಯ್ ಕ್ಯಾಸ್ತಲಿನೊ, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು, ಮಕ್ಕಳ ಹಕ್ಕು ಸಮಿತಿಯ ಸದಸ್ಯೆ ವನಿತಾ ತೋರ್ವಿ ಮೃತ ಕಂದಮ್ಮಗಳ ಅಂತಿಮ ದರ್ಶನ ಪಡೆದರು.
ಉಡುಪಿ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಎರಡು ಚರ್ಚುಗಳಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಖುದ್ಧಾಗಿ ಹಾಜರಾಗಿ ಶೃದ್ಧಾಂಜಲಿಯನ್ನು ಸಮರ್ಪಿಸಿದರು. ಅಲ್ಲದೆ ಪೋಲಿಸ್ ಇಲಾಖೆಯಿಂದ ಸೂಕ್ತ ಪೋಲಿಸ್ ಬಂದೋಬಸ್ತನ್ನು ಮಾಡಿ ಅಂತಿಮ ಸಂಸ್ಕಾರ ವ್ಯವಸ್ಥಿತವಾಗಿ ನಡೆಸಲು ಸಹಕರಿಸಿರಿದ್ದು ನೆರೆದವರ ಶ್ಲಾಘನೆಗೆ ಪಾತ್ರವಾಯಿತು.
ಮೃತ ದೇಹಗಳನ್ನು ಅಂಬುಲೆನ್ಸ್‍ಗಳ ಮೂಲಕ ಚರ್ಚುಗಳಿಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಸ್ತೆಯುದ್ದಕ್ಕೂ ಸಾವಿರಾರು ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಮೃತ ಕಂದಮ್ಮಗಳ ಅಂತಿಮ ದರ್ಶನ ಪಡೆದರು. ತಮ್ಮ ಮಕ್ಕಳನ್ನು ಕಳೆದುಕೊಂಡು ಪೋಷಕರ ಆಂಕ್ರಂದನ ಮುಗಿಲು ಮುಟ್ಟಿತ್ತು. ವಿಪರೀತ ಮಳೆಯ ನಡುವೆಯೂ ಮಡಿದ ಮಕ್ಕಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರದ್ಧಾಂಜಲಿ ಸಮರ್ಪಿಸಿದರು.