Home Mangalorean News Kannada News ದಕ್ಷಿಣ ಕನ್ನಡ ಜಿಲ್ಲೆ: ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ: ಏ.26ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು

ದಕ್ಷಿಣ ಕನ್ನಡ ಜಿಲ್ಲೆ: ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ: ಏ.26ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು

Spread the love

ದಕ್ಷಿಣ ಕನ್ನಡ ಜಿಲ್ಲೆ: ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ: ಏ.26ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು

ಮಂಗಳೂರು:  ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ 17-ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು.

200- ಬೆಳ್ತಂಗಡಿ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಬೆಳ್ತಂಗಡಿಯ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು ಕಾಲೇಜಿನಲ್ಲಿ ನಡೆಯಿತು. 201- ಮೂಡಬಿದ್ರೆ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಮೂಡಬಿದ್ರೆಯ ಮಹಾವೀರ ಜೈನ್ ಕಾಲೇಜಿನಲ್ಲಿ ನಡೆಯಿತು. 202-ಮಂಗಳೂರು ನಗರ ಉತ್ತರ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಮಂಗಳೂರಿನ ಕೊಡಿಯಾಲ್‍ಬೈಲ್‍ನಲ್ಲಿರುವ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. 203- ಮಂಗಳೂರು ನಗರ ದಕ್ಷಿಣ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಮಂಗಳೂರಿನ ಕೆನರಾ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ನಡೆಯಿತು. 204- ಮಂಗಳೂರು ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಕೊಣಾಜೆಯ ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ನಡೆಯಿತು. 205-ಬಂಟ್ವಾಳ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು. 206-ಪುತ್ತೂರು ವಿಧಾನಸಭಾಕ್ಷೇತ್ರ ದ ಮಸ್ಟರಿಂಗ್ ಕಾರ್ಯ ಪುತ್ತೂರಿನ ತೆಂಕಿಲ ವಿವೇಕನಂದಾ ಆಂಗ್ಲ ಮಧ್ಯಮ ಶಾಲೆಯಲ್ಲಿ ನಡೆಯಿತು. 207-ಸುಳ್ಯ ವಿಧಾನಸಭಾಕ್ಷೇತ್ರ ದ ಮಸ್ಟರಿಂಗ್ ಕಾರ್ಯ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ನಡೆಯಿತು.

ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಮಸ್ಟರಿಂಗ್ ಕಾರ್ಯ ಜರುಗುವ ಶಾಲಾ-ಕಾಲೇಜುಗಳ ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್ ಗಾಗಿ ನಿಯೋಜಿತಗೊಂಡಿರುವ ಪೊಲೀಸರು, ಸಿಆರ್‍ಪಿಎಫ್ ಯೋಧರು, ಗೃಹರಕ್ಷಕದಳದವರು ಕೂಡ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ, ಪೊಲೀಸರು, ಯೋಧರನ್ನು ಕರೆದುಕೊಂಡು ಹೋಗಲು ಬಸ್ ಗಳು ಹಾಗೂ ವಿವಿಧ ವಾಹನಗಳು ಶಾಲಾ ಕಾಲೇಜುಗಳ ಆವರಣದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು. ಆಯಾ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ, ಬಸ್ ಗಳು‌ ಹಾಗೂ ವಾಹನಗಳನ್ನು ನಿಯೋಜಿಸಲಾಗಿತ್ತು. ಶಾಲಾ ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‍ಗಳ ವಿವರವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನೊಂದೆಡೆ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಅನ್ನು ವಿತರಿಸಲು ಸೆಕ್ಟರ್‍ವಾರು ಕೌಂಟರ್ಗಳನ್ನು ಸ್ಥಾಪಿಸಿ, ಆ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು. ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಮಸ್ಟರಿಂಗ್ ಕಾರ್ಯಕ್ಕೆ ಆಗಮಿಸಿದ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಲ್ಲಿ, ತ್ವರಿತ ಸ್ಪಂದನೆಗಾಗಿ, ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು.

ಅಚ್ಚುಕಟ್ಟಾದ ವ್ಯವಸ್ಥೆ: ನಗರದ ವಿವಿಧ ಶಾಲಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾದ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ, ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ನೆರವೇರಿಸಲು ಪೂರ್ವಭಾವಿಯಾಗಿ ಯೋಜನೆ ರೂಪಿಸಿ, ಅದರಂತೆಯೇ ಕಾರ್ಯಗತಗೊಳಿಸಲಾಯಿತು. ಚುನಾವಣಾ ಸಾಮಗ್ರಿ ವಿತರಣೆ, ಮತಯಂತ್ರಗಳ ವಿತರಣೆ, ಚುನಾವಣೆಗೆ ಮತಗಟ್ಟೆಗಳಿಗೆ ನಿಯೋಜನೆ, ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಉಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಯಿತು. ಮತಗಟ್ಟೆಗಳತ್ತ ತೆರಳುವ ಮುನ್ನ ಮಧ್ಯಾಹ್ನದ ಊಟ ಪೂರೈಸಿಕೊಂಡು ಹೋಗುವ ರೀತಿ ವ್ಯವಸ್ಥೆ ಮಾಡಲಾಯಿತು. ಊಟದ ವಿತರಣೆ ಸ್ಥಳದಲ್ಲಿ ಗೊಂದಲ ಉಂಟಾಗದಂತೆ, ಸಾಕಷ್ಟು ಸಂಖ್ಯೆಯಲ್ಲಿ ಕೌಂಟರ್‍ಗಳನ್ನು ತೆರೆದು, ಸರದಿ ಸಾಲಿನಲ್ಲಿ ಬಂದು ಊಟ ಸ್ವೀಕರಿಸಲು ವ್ಯವಸ್ಥೆಗೊಳಿಸಲಾಗಿತ್ತು.
ಮತದಾನ ಕಾರ್ಯ ಏ. 26 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದ್ದು, ಸುಗಮ ಮತದಾನಕ್ಕೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಮತದಾರರು ತಪ್ಪದೆ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ಜಿಲ್ಲಾಡಳಿತದ ಆಶಯವಾಗಿದೆ.

ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಬೆಳ್ತಂಗಡಿ, ಮೂಡಬಿದ್ರೆ ಹಾಗೂ ಮಂಗಳೂರಿನ ಕೆನರಾ ಪ್ರೌಢಶಾಲೆ ಯ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ, ಚುನಾವಣಾ ಸಿಬ್ಬಂದಿಗಳಿಗೆ ಆತ್ಮವಿಶ್ವಾಸ ತುಂಬಿದರು.


Spread the love

Exit mobile version