ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ನಾಮಪತ್ರ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸುನೀಲ್ ಕುಮಾರ್, ಸಂಜೀವ ಮಠಂದೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡ ಪುರುಷೋತ್ತಮ ಭಟ್ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸುವ ವೇಳೆ ನಳಿನ್ ಕುಮಾರ್ ತಮ್ಮ ಆಸ್ತಿಪಾಸ್ತಿ ವಿವರಗಳನ್ನು ಸಲ್ಲಿಸಿದ್ದು, ಅವರ ಬಳಿ ₹ 6,55,251 ಮೊತ್ತದ ಚರಾಸ್ತಿ ಹಾಗೂ ಪತ್ನಿ ಶ್ರೀದೇವಿ ಎನ್. ಶೆಟ್ಟಿ ಅವರ ಬಳಿ ₹ 30,42,048 ಮೊತ್ತದ ಚರಾಸ್ತಿ ಇದೆ. ₹20,13,000 ಮೊತ್ತದ ಸ್ಥಿರಾಸ್ತಿ ನಳಿನ್ ಕುಮಾರ್ ಅವರ ಹೆಸರಿನಲ್ಲಿದ್ದರೆ, ಪತ್ನಿಯ ಹೆಸರಿನಲ್ಲಿ ₹ 88,00,000 ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಯ ಹೆಸರಿನಲ್ಲಿ 44.5 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಮಕ್ಕಳಾದ ಸನ್ನಿಧಿ ಶೆಟ್ಟಿ ಮತ್ತು ಸಂಸ್ಕೃತಿ ಶೆಟ್ಟಿ ಅವರ ಖಾತೆಯಲ್ಲಿ ತಲಾ ₹ 15,633 ಇದೆ. ಅವರ ಬಳಿ 10 ಗ್ರಾಂ ಚಿನ್ನ ಮತ್ತು ಪತ್ನಿಯ ಬಳಿ 970 ಗ್ರಾಂ ಚಿನ್ನ ಹಾಗೂ ಇಬ್ಬರು ಮಕ್ಕಳ ಬಳಿ ತಲಾ 30 ಗ್ರಾಂ ಚಿನ್ನ ಇದೆ. ಪತ್ನಿಯ ಬಳಿ ಆಲ್ಟೋ ಕಾರು ಇದೆ ಎಂಬುದಾಗಿ ಘೋಷಿಸಿದ್ದಾರೆ.
ಅವರ ವಿರುದ್ಧ ಬಂಟ್ವಾಳ, ಮಂಗಳೂರು ಪೂರ್ವ, ಮಂಗಳೂರು ಉತ್ತರ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಹೈಕೋರ್ಟ್ನಲ್ಲಿ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಮಂಗಳೂರು ನ್ಯಾಯಾಲಯದಲ್ಲಿಯೂ ಪ್ರಕರಣವೊಂದು ವಿಚಾರಣೆ ಹಂತದಲ್ಲಿದೆ. ವೈಯಕ್ತಿಕ ನಿಂದನೆ, ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣ, ಅಕ್ರಮವಾಗಿ ಸಭೆ ಸೇರಿದ ಮತ್ತು ಸಾರ್ವಜನಿಕ ಸಾರಿಗೆಗೆ ತೊಂದರೆಯೊಡ್ಡಿದ, ಕ್ರಿಮಿನಲ್ ಬೆದರಿಕೆಯೊಡ್ಡಿದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.