ದಕ್ಷಿಣ ವಲಯ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟ – ಮಂಗಳೂರು ವಿವಿ ತಂಡ ಪ್ರಥಮ
ಉಡುಪಿ: ಮಂಗಳೂರು ವಿವಿ, ತೆಂಕನಿಡಿಯೂರು ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿವಿ ತಂಡ ವಿಜಯ ಸಾಧಿಸಿದೆ.
ಪ್ರತ್ಯೇಕ ಪಂದ್ಯಾಟಗಳಲ್ಲಿ ತನ್ನ ಎದುರಾಳಿಯಾಗಿದ್ದ ಮೂರು ತಂಡಗಳ ವಿರುದ್ದ ಮಂಗಳೂರು ವಿವಿ ತಂಡವು ಸೆಣಸಾಡಿ ಎಲ್ಲಾ ತಂಡಗಳನ್ನು ಮಣಿಸಿ ಗರಿಷ್ಠ 6 ಅಂಕಗಳನ್ನು ಗಳಿಸಿದೆ.
ಚೆನ್ನೈ ನ ವೆಲ್ಸ್ ಇನಸ್ಟೀಟ್ಯೂಟ್ ಆಫ್ ಸೈನ್ಸ್ ಟೆಕ್ನಾಲಜಿ ಅ್ಯಂಡ್ ಅಡ್ವಾನ್ಸ್ ಸ್ಟಡೀಸ್ ತಂಡ ದ್ವಿತೀಯ, ಎಂ ಎಸ್ ವಿಶ್ವವಿದ್ಯಾನಿಲಯ ತಿರುನಲ್ವೇಲ ತಂಡ ತೃತೀಯ ಹಾಗೂ ಚೆನ್ನೈನ ಎಸ್ ಆರ್ ಎಂ ವಿಶ್ವವಿದ್ಯಾಲಯ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ವಲಯದ 7 ರಾಜ್ಯಗಳ ವಿವಿ ತಂಡಗಳು ಭಾಗವಹಿಸಿದ್ದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಡಾ|ಎ ವಿ ಖಾನ್, ಕಾಲೇಜಿನ ಪ್ರಾಂಶುಪಾಲ ಪ್ರೋ ಬಾಲಕೃಷ್ಣ ಹೆಗ್ಡೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಕೃಷ್ಣ ಶೆಟ್ಟಿ, ತೆಂಕನಿಡಿಯೂರು ರಾಧ್ಮ ರೆಸಿಡೆನ್ಸಿಯ ಪ್ರವರ್ತಕ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಕೊಜಕುಳಿ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಕುಂದರ್, ಧನಂಜಯ ಕುಂದರ್, ಧನಂಜಯ ಭಟ್, ದೈಹಿಕ ಶಿಕ್ಷಣ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ ಕೆ, ಉಪನಿರ್ದೇಶಕ ಡಾ|ಜೆರಾಲ್ಡ್ ಸಂತೋಷ್ ಡಿಸೋಜಾ, ಜಿಲ್ಲಾ ಕಬಡಿ ಅಸೋಶಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಕ್ರೀಡಾ ಸಂಚಾಲಕ ಡಾ ರಾಮಚಂದ್ರ ಪಾಟ್ಕರ್ ಮೊದಲಾದವರು ಉಪಸ್ಥಿತರಿದ್ದರು.