ದಕ ಜಿಲ್ಲಾಡಳಿತ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯುಷ್ ವಿದ್ಯಾಲಯಗಳು ಹಾಗೂ ಜಿಲ್ಲೆಯ ವಿವಿಧ ಯೋಗ ಸಂಘಟನೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಕ್ರವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶುಭ ಹಾರೈಸಿದ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯಿಂದಾಗಿ ಯೋಗಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವದ ಹಲವು ಭಾಗಗಳಲ್ಲಿ ಈ ಯೋಗ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ, ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ಸಿ.ಬಿ, ಮಹಾನಗರಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಆರೋಗ್ಯಧಿಕಾರಿ ಡಾ.ತಿಮ್ಮಯ್ಯ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ಜೆಸಿಂತಾ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಯೋಗ ಗುರು ಡಾ. ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಯೋಗ ನಡೆಯಿತು. ವಿವಿಧ ಆಯುಷ್ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಸದಸ್ಯರು, ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.
ಶಾಸಕರು, ಮೇಯರ್, ಜಿಲ್ಲಾಧಿಕಾರಿಗಳು ಹಾಗೂ ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಗೆ ಸಾಥ್ ನೀಡಿದರು.
ಯೋಗ ಶಿಕ್ಷಕರು ಆಸನಗಳ ನಿರ್ದೇಶನಗಳನ್ನು ನೀಡಿದರು. ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಗಣ್ಯರು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಮಾಡಿದರು. ಯೋಗ ಕಾರ್ಯಕ್ರಮದಲ್ಲಿ ಪೊಲೀಸ್ ಸಿ.ಐ.ಎಸ್.ಎಫ್ ಸಿಬ್ಬಂದಿಗಳು, ಗೃಹರಕ್ಷಕದಳ ಸದಸ್ಯರು ಭಾಗವಹಿಸಿದ್ದರು.