ದಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ವಿರುದ್ದ ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ಮನವಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುವ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಮತ್ತು ಈ ಕೃತ್ಯಗಳಿಗೆ ಕುಮ್ಮಕ್ಕು ನೀಡುವವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗುರುವಾರ ಪೊಲೀಸ್ ಕಮಿಷನರ್ ರಾದ ಡಾ| ಹರ್ಷ ಪಿ.ಎಸ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್ ರವರಿಗೆ ಜಿಲ್ಲಾ ಕಾಂಗ್ರೆಸ್ ನಿಯೋಗವನ್ನು ಒಳಗೊಂಡ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರ ನೇತೃತ್ವದಲ್ಲಿ ಮನವಿಯನ್ನು ನೀಡಲಾಯಿತು.
ಈ ದುರ್ಘಟನೆಗಳಲ್ಲದೆ ಕೆಲವು ಪ್ರದೇಶಗಳಲ್ಲಿ ಮಾದಕ ದ್ರವ್ಯ ಮಾರಾಟಗಳು ಆಗುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ಇನ್ನಿತರ ಹಲವಾರು ಘಟನೆಗಳು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತವಾದ ಪೊಲೀಸ್ ಭದ್ರತೆಯ ವ್ಯವಸ್ಥೆಯನ್ನು ಮಾಡುವಂತೆ, ಸದ್ರಿ ಇಂತಹ ಹೇಯಾ ಕೃತ್ಯಗಳನ್ನು ನಡೆಸುವ ಅಪರಾಧಿಗಳಿಗೆ ಮಾತ್ರವಲ್ಲದೆ ಈ ಕೃತ್ಯಗಳನ್ನು ನಡೆಸುವವರ ಹಿಂದೆ ಯಾರ ಕೈವಾಡ ಇದೆಯೋ ಅವರನ್ನು ಕೂಡಾ ಬಂಧಿಸಿ ಸೂಕ್ತ ಕ್ರಮಗಳನ್ನು ಜರುಗಿಸಿ ಮತ್ತು ಜಿಲ್ಲೆಯ ಜನ ಶಾಂತಿಯುತವಾಗಿ ಜೀವನ ನಡೆಸಲು ಪೂರಕವಾಗಿ ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಮೂಲಕ ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಪರಿಷತ್ತು ಸದಸ್ಯರಾದ ಐವನ್ ಡಿ’ಸೋಜಾ, ಬ್ಲಾಕ್ ಅಧ್ಯಕ್ಷ ಸುರೇಂದ್ರ ಬಿ.ಕಂಬಳಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ಬಿ.ಅಬೂಬಕ್ಕರ್, ಶುಭೋದಯ ಆಳ್ವ, ಟಿ.ಕೆ ಸುಧೀರ್, ಗಣೇಶ್ ಪೂಜಾರಿ, ಇಲ್ಯಾಸ್ ಕಡಬ, ಖಾಲಿದ್ ಉಜಿರೆ, ಜಯಶೀಲಾ ಅಡ್ಯಂತಾಯ, ಸಿ.ಎಮ್ ಮುಸ್ತಫ, ಸುರೇಶ್ ಶೆಟ್ಟಿ, ಮ.ನ.ಪಾ ಸದಸ್ಯ ಲ್ಯಾನ್ಸಿ ಲೋಟ್ ಪಿಂಟೋ, ಶಂಶುದ್ಧೀನ್ ಕುದ್ರೋಳಿ, ಎನ್.ಎಸ್.ಯು.ಐ ಪದಾಧಿಕಾರಿಗಳಾದ ಸವಾದ್ ಸುಳ್ಯ, ಶೌನಕ್ ರೈ, ಶ್ರೇಯಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು.