ದಕ ಜಿಲ್ಲೆಯ ಕೋಮು ಘರ್ಷಣೆಗಳನ್ನು ಸಿಬಿಐ ತನಿಖೆಗೊಳಪಡಿಸಿ: ಎಂಬಿ ಪುರಾಣಿಕ್

Spread the love

ದಕ ಜಿಲ್ಲೆಯ ಕೋಮು ಘರ್ಷಣೆಗಳನ್ನು ಸಿಬಿಐ ತನಿಖೆಗೊಳಪಡಿಸಿ: ಎಂಬಿ ಪುರಾಣಿಕ್

ಮಂಗಳೂರು: ಕಳೆದ ಹಲವಾರು ವರುಷಗಳಿಂದ ಕೋಮು ಘರ್ಷಣೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯು ಸೂಕ್ಷ್ಮ ಜಿಲ್ಲೆಯಾಗಿ ಪರಿವರ್ತನೆಯಾಗಿದ್ದು, ಇತ್ತೀಚಿನ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಡುವಿನ ಮಾತುಕತೆಯಿಂದ ಇಂತಹ ಘರ್ಷಣೆಗಳ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಅಧ್ಯಕ್ಷ ಎಮ್ ಬಿ ಪುರಾಣಿಕ್ ಹೇಳಿದ್ದಾರೆ. ಅವರು ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಪೋಲಿಸ್ ಇಲಾಖೆಯ ಕೆಲಸದಲ್ಲಿ ಮೂಗು ತೂರಿಸುತ್ತಿದ್ದು ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಸೆಕ್ಷನ್ 307 ರ ಅಡಿಯಲ್ಲಿ ಕೇಸು ದಾಖಲಿಸುವಂತೆ ಪೋಲಿಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತನ್ನ ಅಧಿಕಾರವನ್ನು ದುರುಪಯೋಗಗೊಳಿಸಿದ್ದು, ಕಲ್ಲಡ್ಕ ಘಟನೆಯನ್ನು ಸ್ವತಂತ್ರವಾಗಿ ವಿಚಾರಣೆ ನಡೆಸಲು ಪೋಲಿಸರಿಗೆ ಅವಕಾಶ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಹಲವಾರು ಕೋಮು ಪ್ರಚೋದಿತ ಘಟನೆಗಳು ನಡೆದಿದ್ದು, ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎನ್ನುವ ಸಂಶಯ ಮೂಡುತ್ತದೆ.

ಒಂದು ನಿರ್ದಿಷ್ಠ ಸಮುದಾಯವನ್ನು ಒಲೈಸುವ ನಿಟ್ಟಿನಲ್ಲಿ ರಮಾನಾಥ ರೈ ಅವರು ಹಿಂದೂ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜಿಲ್ಲೆಯ ಜನತೆ ಕಲ್ಲಡ್ಕ ಪ್ರಭಾಕರ ಭಟ್ ಕುರಿತು ರಮಾನಾಥ್ ರೈ ನೀಡಿರುವ ಹೇಳಿಕಯಿಂದ ನೊಂದಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ಕೋಮು ಸಂಬಂಧಿತ ಘಟನೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಪ್ರತಿಯೊಂದು ಕೋಮು ಘರ್ಷಣೆಯಲ್ಲಿ ಹಿಂದೂ ಯುವಕರು ಟಾರ್ಗೆಟ್ ಆಗುವುದು ನಿಲ್ಲಬೇಕು ಎಂದರು.

ಸಚಿವ ರಮಾನಾಥ ರೈ ವಿರುದ್ದ ಜೂನ್ 24 ರಂದು ಬಿಸಿ ರೋಡಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ಮಂಗಳೂರು, ಉಳ್ಳಾಲ, ಗುರುಪುರ, ಮೂಡಬಿದ್ರೆ, ಕಾರ್ಕಳ, ಉಡುಪಿ, ಪುತ್ತೂರು, ಬೆಳ್ತಂಗಡಿ, ಕಲ್ಲಡ್ಕ, ಬಂಟ್ವಾಳ ಮತ್ತು ಸುಳ್ಯದಿಂದ ಪ್ರತಿಭಟನಕಾರರು ಆಗಮಿಸಲಿದ್ದಾರೆ ಎಂದರು.

ಶರಣ್ ಪಂಪ್ ವೆಲ್, ಭುಜಂಗ ಕುಲಾಲ್, ಕೃಷ್ಣಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love