ದನದ ವ್ಯಾಪಾರಿ ಹುಸೈನಬ್ಬ ಹತ್ಯೆ : ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ

Spread the love

ದನದ ವ್ಯಾಪಾರಿ ಹುಸೈನಬ್ಬ ಹತ್ಯೆ : ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ

ಉಡುಪಿ : ಉಡುಪಿ ಸಮೀಪದ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕೋಮುವಾದಿ ಗುಂಪೊಂದರ ಜೊತೆ ಕಾನೂನು ಪಾಲಿಸಬೇಕಾದ ಪೊಲೀಸರೇ ಶಾಮೀಲಾಗಿ ದನದ ವ್ಯಾಪಾರಿಯೊಬ್ಬನನ್ನು ಹತ್ಯೆಗೈದಿರುವುದು ಖಂಡನೀಯ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಉಡುಪಿ ಜಿಲ್ಲಾ ಅಧ್ಯಕ್ಷ ಅಶ್ರಫ್ ರಝಾ ಅಂಜದಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಮಾತ್ರವಲ್ಲದೇ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಇದಾಗಿದ್ದು, ದುಷ್ಕರ್ಮಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಘಟನೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಾಗಿರುವ ಪೊಲೀಸರನ್ನೂ ಸೇರಿದಂತೆ ಉಳಿದ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರಂತಹ ನಿಷ್ಠಾವಂತ ಅಧಿಕಾರಿಗಳ ಸೇವೆ ಪೊಲೀಸ್ ಇಲಾಖೆಗೆ ಸದಾಕಾಲ ಅಗತ್ಯವಿದೆ ಎಂದಿರುವ ಅವರು ಧರ್ಮಗಳ ನಡುವೆ ಸಮಾಜವನ್ನು ಒಡೆಯುವ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕೋಮುವಾದಿ ಸಂಘಟನೆಗಳಿಂದ ದೇಶದ ಏಕತೆಗೆ ಬಲುದೊಡ್ಡ ಆತಂಕ ಎದುರಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾತ್ಯಾತೀತ ತತ್ವಗಳಡಿ ನಂಬಿಕೆಯಿರಿಸಿರುವ ಭಾರತೀಯ ಸಂವಿಧಾನ ಮತ್ತು ಜನತೆಯ ರಕ್ಷಣೆಗಾಗಿ ನೇಮಕಗೊಳ್ಳುವ ಪೊಲೀಸ್ ಸಿಬ್ಬಂದಿಗಳು ಕೋಮುವಾದಿಗಳ ಜೊತೆ ಕೈಜೋಡಿಸಿ ಸಮಾಜದ ಶಾಂತಿ ಕದಡುವ ಕೃತ್ಯಗಳಲ್ಲಿ ತಮ್ಮ ಸಹಕಾರವನ್ನೂ ನೀಡುತ್ತಿರುವುದು ದೇಶದ ಭದ್ರತೆಗೆ ಉಂಟಾಗಿರುವ ಬಲುದೊಡ್ಡ ಅಪಾಯ. ಪ್ರಸ್ತುತ ಘಟನೆಯಲ್ಲಿ ಪೊಲೀಸ್ ಅಧಿಕಾರಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಉಡುಪಿ ಜಿಲ್ಲಾ ಎಸ್ಪಿಯವರ ನಡೆಯು ಇಡೀ ದೇಶದ ಕಾನೂನು ಪಾಲಕರಿಗೆ ಪಾಠವಾಗಬೇಕಿದೆ ಎಂದಿದ್ದಾರೆ.


Spread the love