ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ

Spread the love

ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ

ಮಂಗಳೂರು: ಮಂಗಳೂರು ನಗರದ  ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ದನ ಕಳ್ಳತನ ಮಾಡಿದ ಆರೋಪಿಗಳನ್ನು ಹಾಗೂ ದನ ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಅಗಸ್ಟ್ 8 ರಂದು ಬೆಳಿಗ್ಗೆ 8-30 ಗಂಟೆಯಿಂದ 9 ರಂದು  ಬೆಳಿಗ್ಗೆ   5-00 ಗಂಟೆ ಮಧ್ಯೆ ಮಂಗಳೂರು ತಾಲೂಕು ಮುನ್ನೂರು  ಗ್ರಾಮದ ಕುತ್ತಾರ್ ಪದವು  ಎಂಬಲ್ಲಿರುವ ಬಾಲಸಂರಕ್ಷಣಾ ಕೇಂದ್ರದಲ್ಲಿ ಸಾಕುತ್ತಿದ್ದ ಸುಮಾರು 10,000/- ಮೌಲ್ಯದ ಒಂದು ದನವನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರ ಮೇಲ್ವಿಚಾರಕಿಯವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದನಕಳ್ಳತನ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಹಾಗೂ ದನ ಕಳ್ಳತನ ಮಾಡಿ ಸಾಗಾಟ ಮಾಡಿದ ಕಾರಿನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ಬೆಂಗ್ರೆ ಜುಮ್ಮಾ ಮಸೀದಿ ನಿವಾಸಿ ಅಹಮ್ಮದ್ ಕಬೀರ್ (29) ಹಾಗೂ ಬಂಟ್ವಾಳ ನಿವಾಸಿ ಸಾಹುಲ್ ಹಮೀದ್ (28) ಎಂಬವರನ್ನು ಮಂಗಳವಾರ ಮಂಗಳೂರು ನಗರದ ಕೂಳೂರು ರಿಲೆಯನ್ಸ್ ಪೆಟ್ರೋಲ್ ಪಂಪ್ ಬಳಿ ವಶಕ್ಕೆ ಪಡೆದುಕೊಂಡು ಅವರ ವಶದಿಂದ ದನ ಕಳ್ಳತನ ಮಾಡಲು ಉಪಯೋಗಿಸಿದ ಕೆಎ-19-ಎಂಜಿ- 4760 ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರು ಹಾಗೂ ನಗದು ಹಣ ರೂ. 6,300/- ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 5,06,300/- ಆಗಿದೆ.

ಆರೋಪಿಗಳ ಪೈಕಿ ಅಹಮ್ಮದ್ ಕಬೀರ್ ಎಂಬಾತನ ವಿರುದ್ಧ  ಈ ಹಿಂದೆ ಪಣಂಬೂರು, ಬಜಪೆ, ಕಾರ್ಕಳ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 7 ದನ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಶಾಹುಲ್ ಹಮೀದ್ ಎಂಬಾತನ ವಿರುದ್ಧ ಕಡಬ, ಉಪ್ಪಿನಂಗಡಿ, ಪಣಂಬೂರು, ಬಜಪೆ ಮತ್ತು ಕಾರ್ಕಳ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನಕ್ಕೆ ಸಂಬಂಧಪಟ್ಟಂತೆ 8 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ   ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

.


Spread the love