ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ
ಉಡುಪಿ: ಹೈನುಗಾರಿಕೆ ನಡೆಸುವವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕೆಂಬ ಕರ್ನಾಟಕ ಬಿಜೆಪಿ ಸರಕಾರದ ಆದೇಶವನ್ನು ತಕ್ಷಣ ಹಿಂಡೆಯಬೇಕೆಂದು ಕಾಂಗ್ರೆಸ್ ಮುಖಂಡ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕ (ಹಾಲು ಉತ್ಪಾದಕರ ಸಂಘಗಳ ಕ್ಷೇತ್ರ) ಅಲೆವೂರು ಹರೀಶ್ ಕಿಣಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಗ್ರಾಮೀಣ ಜನರ ಕಾಮಧೇನು ಆಗಿರುವ ಹೈನುಗಾರಿಕೆಯನ್ನು ಅವಲಂಭಿಸಿರುವವರಿಗೆ ರಾಜ್ಯ ಬಿಜೆಪಿ ಸರಕಾರದ ಈ ನಿರ್ಧಾರದಿಂದ ಹೊಟ್ಟೆಗೆ ಹೊಡೆದಂತಾಗಿದೆ. ಈ ಆದೇಶ ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರಕಾರದ ಈ ನಿರ್ಧಾರ ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಹೈನುಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿಕೊಡಲು ಮೊದಲ ಹೆಜ್ಜೆ ಇಟ್ಟಂತಾಗಿದೆ. ಅದುದರಿಂದ ಬಡ, ಗ್ರಾಮೀಣ ಹೈನುಗಾರರಿಗೆ ಗೌರವಾನ್ವಿತ ಜೀವನ ನಡೆಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ಮೂಲಕ ಕ್ರಮ ಕೈಗೊಳ್ಳುವಂತೆ ಹರೀಶ್ ಕಿಣಿ ಆಗ್ರಹಿಸಿದ್ದಾರೆ.