ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಐದು ಮಂದಿ ಸೆರೆ
ಬಂಟ್ವಾಳ: ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಮೇರೆಗೆ ತಂಡವೊಂದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮಂಗಳವಾರ ತಡ ರಾತ್ರಿ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲಿನ ಉಮರ್ ಫಾರೂಕ್ (26), ಮುಹಮ್ಮದ್ ರಮೀಝ್ ( 22), ಮಂಗಿಳಪದವು ನಿವಾಸಿ ಮುಹಮ್ಮದ್ ಅಬೂಬಕರ್ (21), ಮಂಚಿ ನಿವಾಸಿ ಅಬ್ದುಲ್ ಖಾದರ್ (40), ಬಾಳ್ತಿಲ ನಿವಾಸಿ ಖಲೀಲ್ (24) ಬಂಧಿತ ಆರೋಪಿಗಳು.
ಸೆ. 4ರ ತಡರಾತ್ರಿ 1.30ರ ಸುಮಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ಗಸ್ತು ತಿರುತಿದ್ದಾಗ ಮಂಚಿ ಕಟ್ಟೆ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ ತಂಡವನ್ನು ವಿಚಾರಿದಾಗ ದರೋಡೆಗೆ ಸಂಚು ರೂಪಿಸಿರುವ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಓರ್ವ ಓಡಿಹೋಗಿದ್ದು ಆತನು ಸುರಿಬೈಲ್ ನ ಅಕ್ಬರ್ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಮಾರಕಾಯುಧ ಹಾಗು ಗಾಂಜ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದವರಲ್ಲಿ ಉಮರ್ ಫಾರೂಕ್ ಮತ್ತು ಇಬ್ರಾಹಿಂ ಖಲೀಲ್ ಎಂಬವರ ಮೇಲೆ ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.