ದರೋಡೆ ಪ್ರಕರಣ ಬೇಧಿಸಿದ ಉರ್ವ ಪೊಲೀಸರು; 1.75 ಕೋಟಿ ರೂ. ವಶ – ಇಬ್ಬರ ಬಂಧನ

Spread the love

ದರೋಡೆ ಪ್ರಕರಣ ಬೇಧಿಸಿದ ಉರ್ವ ಪೊಲೀಸರು; 1.75 ಕೋಟಿ ರೂ. ವಶ – ಇಬ್ಬರ ಬಂಧನ

ಮಂಗಳೂರು:ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು 1.75 ಕೋಟಿ ರೂ ನಗದು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಬಂಟ್ವಾಳ ತಾಲೂಕು ತಲಪಾಡಿ ಬಿಸಿರೋಡ್ ನಿವಾಸಿ ಅಬ್ದುಲ್ ಮನಾನ್ (29) ಮತ್ತು ಪಡೀಲ್ ನಿವಾಸಿ ರಾಝಿಕ್ ಎಂದು ಗುರುತಿಸಲಾಗಿದೆ. ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸುರೇಶ್ ಅವರು ಅಕ್ಟೋಬರ್ 23 ರಂದು ಮಧ್ಯಾಹ್ನ ಮಂಜುನಾಥ ಗಣಪತಿ ಪಾಲಂನಕರ ಎಂಬವರು ಮುಂಬೈನಿಂದ ಖಾಸಗಿ ಬಸ್ಸಿನಲ್ಲಿ ಬಂದು ಲೇಡಿಹಿಲ್ ಬಸ್ ನಿಲ್ದಾಣ ಬಳಿ ಇಳಿದುಕೊಂಡಿದ್ದರು. ರಸ್ತೆ ದಾಟುವ ವೇಳೆ ದುಷ್ಕರ್ಮಿಗಳಿಬ್ಬರು ತನ್ನನ್ನು ತಡೆದು ಕಾರಿನಲ್ಲಿ ಅಪರಹರಿಸಿ ನಗದು ಮತ್ತು 2 ಮೊಬೈಲ್ ಗಳನ್ನು ಕಸಿದು ಪರಾರಿಯಾಗಿದ್ದರು ಎಂದು ಘಟನೆ ನಡೆದ ಮೂರು ದಿನಗಳ ಬಳಿಕ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ಬೆನ್ನತ್ತಿದ ಮಂಗಳೂರು ನಗರ ಪೊಲೀಸ್ ಆಯುಕ್ತರು ತನೀಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಪ್ರಕರಣ ಭೇಧಿಸಿದ ವಿಶೇಷ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ತಿಯಾಗಿದ್ದಾರೆ.

ಆರೋಪಿಗಳಿಂದ 1.75 ಕೋಟಿ ರೂ ನಗದನ್ನು ವಶಕ್ಕೆ ಪಡೆಯಲಾಗಿದ್ದು, 1.40 ಕೋಟಿ ರೂ. ಮೌಲ್ಯದ 2000 ಮುಖಬೆಲೆಯ ನೋಟುಗಳು, 30ಲಕ್ಷ ರೂ. ಮೌಲ್ಯದ 500 ರೂ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಹಣವು ಕಾರ್ ಸ್ಟ್ರೀಟ್ ನಲ್ಲಿರುವ ವೈಷ್ಣವಿ ಬೆಳ್ಳಿ ಆಭರಣಗಳ ಮಳಿಗೆ ಮಾಲಕ ಸಂತೋಷ್ ಎಂಬವರಿಗೆ ಸೇರಿದ್ದಾಗಿದೆ. ಹಣವನ್ನು ಮುಂಬೈನಿಂದ ಮಂಗಳೂರಿಗೆ ತರುವಾಗ ಆರು ಮಂದಿ ದುಷ್ಕರ್ಮಿಗಳು ಸೇರಿ ದರೋಡೆ ಮಾಡಿದ್ದರು.

ವಿಶೇಷ ತಂಡದಲ್ಲಿ ಸಿಸಿಬಿ ಪೊಲೀಸ್ ನಿರೀಕ್ಷಕ ಶಾಂತಾರಾಮ್, ಪಿಎಸ್ಸ್‌ಐ ಶ್ಯಾಮ್ ಸುಂದರ್, ಸಿಬ್ಬಂದಿ ಚಂದ್ರಶೇಖರ, ರಾಮಣ್ಣ, ರಾಜ, ಚಂದ್ರ ಅಡ್ಡೂರು, ಚಂದ್ರಹಾಸ್ ಸನಿಲ್, ಸೀನಪ್ಪ ಪೂಜಾರಿ, ರಾಜೇಂದ್ರ ಹಾಗೂ ಉರ್ವ ಠಾಣೆ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.


Spread the love