ದಲಿತರನ್ನು ರಕ್ಷಿಸಲು ಯೋಗ್ಯತೆ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ: ಜಿಲ್ಲಾಡಳಿತದ ವಿರುದ್ದ  ಉದಯ್ ಕುಮಾರ್  ತಲ್ಲೂರು ಆಕ್ರೋಶ

Spread the love

 ದಲಿತರನ್ನು ರಕ್ಷಿಸಲು ಯೋಗ್ಯತೆ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ: ಜಿಲ್ಲಾಡಳಿತದ ವಿರುದ್ದ  ಉದಯ್ ಕುಮಾರ್  ತಲ್ಲೂರು ಆಕ್ರೋಶ

ಕುಂದಾಪುರ: ಉಪ್ಪಿನಕುದ್ರು ಪ್ರೌಢ ಶಾಲೆಯಲ್ಲಿ ದಲಿತ ಮುಖ್ಯಶಿಕ್ಷಕಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿ ಅವರ ಮೇಲೆ ದೌರ್ಜನ್ಯವೆಸಗಿರುವುದು ಅಕ್ಷಮ್ಯ. ದಲಿತರ ರಕ್ಷಣೆಗೆ ಧಾವಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೇಲ್ಜಾತಿಯವರ ಪರ ನಿಂತಿರುವುದು ನಾಚಿಕೆಗೇಡು. ಜಿಲ್ಲಾಡಳಿತಕ್ಕೆ ದಲಿತರ ರಕ್ಷಣೆ ಮಾಡಲು ಯೋಗ್ಯತೆ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಲಿ ಎಂದು ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಇದರ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಆಕ್ರೋಶ ವ್ಯಕ್ತಪಡಿಸಿದರು.

ಉಪ್ಪಿನಕುದ್ರು ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕಿ ಮಾಲತಿ ವಿ ಅವರಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿರುವ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸಹಶಿಕ್ಷಕಿ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ದಸಂಸ ಭೀಮಘರ್ಜನೆ ತಾಲೂಕು ಸಮಿತಿ ವತಿಯಿಂದ ಸೋಮವಾರ ಇಲ್ಲಿನ ತಾಲೂಕು ಪಂಚಾಯತ್ ಎದುರು ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿರುವ ಶಾಲೆಯಲ್ಲಿ ದಲಿತ ಮುಖ್ಯ ಶಿಕ್ಷಕಿ ಇರಬಾರದೆಂಬ ಉದ್ದೇಶದಿಂದ ಕಳೆದ ಆರು ತಿಂಗಳುಗಳಿಂದ ಅವರ ವಿರುದ್ದ ಷಡ್ಯಂತರಗಳನ್ನು ನಡೆಸುತ್ತಲೇ ಬಂದಿದ್ದಾರೆ. ಶತಮಾನೋತ್ಸವ ಸಂಭ್ರಮದ ವೇದಿಕೆಯ ಮೇಲೆ ಮೇಲ್ಜಾತಿಯವರಿಗೆ ಸರಿಸಮಾನವಾಗಿ ದಲಿತ ಶಿಕ್ಷಕಿ ಕೂರಬಾರದೆಂಬ ಹಿಡೆನ್ ಅಜೆಂಡಾ ಇಟ್ಟುಕೊಂಡು ಈ ಎಲ್ಲಾ ಗೊಂದಲಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಎಸ್ಡಿಎಂಸಿ ಹಾಗೂ ಸಹಶಿಕ್ಷಕಿಯ ಪರ ನಿಂತಿರುವುದು ಖಂಡನೀಯ. ಶಾಸಕರಿಗೆ ದಲಿತರ ಮತ ಬೇಕು, ಆದರೆ ದಲಿತರ ರಕ್ಷಣೆ ಬೇಡ ಎನ್ನುವಂತೆ ವರ್ತಿಸುತ್ತಿದ್ದಾರೆ. ಶಾಸಕರಾದವರು ಸಭೆ ನಡೆಸಿ ಗೊಂದಲಗಳಿಗೆ ತೆರೆ ಎಳೆಯಬೇಕಿತ್ತು. ಹಾಗೆ ಮಾಡದೇ ಒಂದು ಪಕ್ಷದ ಪರ ನಿಂತು ಕೆಲಸ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಶಾಸಕರು ದಲಿತರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲಾಗಿದ್ದಾರೆ. ನೊಂದ ದಲಿತ ಶಿಕ್ಷಕಿ ಮಾಲತಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ದೂರು ದಾಖಲು ಮಾಡಿದ್ದಾರೆ. ಆದಾದ ಬಳಿಕ ಜಿಲ್ಲಾಧಿಕಾರಿ ಹಾಗೂ ಸಿಎಸ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಡ ಹೇರಿ ಅವರಿಂದ ಪ್ರತಿದೂರು ದಾಖಲು ಮಾಡಿಸಿದ್ದಾರೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ದೂರಿನಲ್ಲೇ ವಿವರಿಸಿದ್ದಾರೆ. ಇದರಲ್ಲೇ ತಿಳಿಯುತ್ತದೆ ಈ ಜಿಲ್ಲಾಡಳಿತ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು. ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೊಂದ ಶಿಕ್ಷಕಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕಿತ್ತು. ಅದನ್ನು ಬಿಟ್ಟು ಪ್ರತಿದೂರು ನೀಡಿದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನಿಯೋಜನೆ ಮಾಡಿರುವುದು ಸರಿಯಾದ ಕ್ರಮವಲ್ಲ. ದಲಿತ ಶಿಕ್ಷಕಿ ಮಾಲತಿ ವಿ ಅವರ ವಿರುದ್ದ ನೀಡಿರುವ ದೂರನ್ನು ಹಿಂಪಡೆಯಬೇಕು. ಈಗಾಗಲೇ ಬಿಇಓ ಕಚೇರಿಗೆ ನಿಯೋಜನೆ ಮಾಡಿದವರನ್ನು ಕೂಡಲೇ ಬೇರೆ ಶಾಲೆಗಾದರೂ ನಿಯೋಜನೆಗೊಳಿಸಬೇಕು ಎಂದು ಒತ್ತಾತಿಸಿದ ಅವರು, ಸಂವಿಧಾನ ವಿರೋಧಿ ಕೆಲಸ ಮಾಡುವ ಅಧಿಕಾರಿಗಳು ಈ ಜಿಲ್ಲೆಯನ್ನು ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.

ಕೇವಲ ಎರಡು-ಮೂರು ಮಕ್ಕಳ ಹಾಜರಾತಿಯಲ್ಲಿ ವ್ಯತ್ಯಾಸಗಳು ಬಂತೆಂದು ದಲಿತ ಶಿಕ್ಷಕಿಯ ವಿರುದ್ದ ಅಧಿಕಾರಿಗಳು ದೂರು ಕೊಡುತ್ತಾರೆ. ಆದರೆ ದಲಿತರ ಅನುದಾನಗಳಲ್ಲಿ ಕೋಟಿಗಟ್ಟಲೇ ಲೂಟಿ ಹೊಡೆದವರ ವಿರುದ್ದ ದೂರು ಕೊಟ್ಟರೂ ಅವರ ವಿರುದ್ದ ಈವರೆಗೂ ಕ್ರಮ ಕೈಗೊಂಡಿಲ್ಲ. ಮೇಲ್ಜಾತಿಯವರಿಗೆ ಒಂದು ಕಾನೂನು, ದಲಿತರಿಗೆ ಒಂದು ಕಾನೂನು ಎಂಬಂತೆ ಅಧಿಕಾರಿಗಳು ವರ್ತಿಸುತ್ತಿರುವುದು ವಿಷಾದನೀಯ. ಇದೇ ರೀತಿ ದಲಿತ ಸಮುದಾಯದವರನ್ನು ತುಳಿಯಲು ಮುಂದಾದರೆ ನಾವು ಸಹಿಸಲ್ಲ. ಅದಕ್ಕೆ ಪ್ರತಿಭಟನೆಯ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಉದಯ್ ಕುಮಾರ್ ತಲ್ಲೂರು ಎಚ್ಚರಿಕೆ ನೀಡಿದರು.

ಅರ್ಧ ಗಂಟೆಗೂ ಮಿಕ್ಕಿ ಧರಣಿಯಲ್ಲಿ ಕೂತು ಸಮಾಲೋಚನೆ!:
ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರತಿಭಟನಾನಿರತರೊಂದಿಗೆ ಕೂತು ಅಹವಾಲು ಆಲಿಸಿದರು. ಸುದೀರ್ಘ ಅರ್ಧ ಗಂಟೆಗೂ ಮಿಕ್ಕಿ ಸಮಾಲೋಚನೆ ನಡೆಸಿದ ಬಾಯಲ್ ತಾಳ್ಮೆಯಿಂದ ಪ್ರತಿಭಟನಾನಿರತರ ಬೇಡಿಕೆಗಳಿಗೆ ಕಿವಿಯಾದರು. ಈಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ ನೊಂದ ಶಿಕ್ಷಕಿಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು. ಬಳಿಕ ಮಾತನಾಡಿದ ಪ್ರತೀಕ್ ಬಾಯಲ್, ನೊಂದ ದಲಿತ ಶಿಕ್ಷಕಿ ಮಾಲತಿ ವಿ ಅವರೊಂದಿಗೆ ಮಾತುಕತೆ ನಡೆಸಿ ಹದಿನೈದು ದಿನಗಳೊಳಗೆ ಗೊಂದಲಗಳನ್ನು ಬಗೆಹರಿಸುವಂತೆ ಭರವಸೆ ನೀಡಿದರು.

ಬಳಿಕ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಕೂತು ಬಗೆಹರಿಸಿಕೊಳ್ಳಬಹುದಾದ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರುವ ತನಕ ಹೋಗಿದೆ. ಶಾಲಾ ವಿದ್ಯಾರ್ಥಿಗಳು ರಾತ್ರಿ ತನಕ ಪ್ರತಿಭಟನೆ ಮಾಡುತ್ತಿದ್ದಾಗ ಶಾಸಕನಾದವನು ಹೋಗುವುದು ನನ್ನ ಜವಾಬ್ದಾರಿ. ಹೀಗಾಗಿ ಶಾಲೆಗೆ ತೆರಳಿ ಗೊಂದಲ ಬಗೆಹರಿಸಲು ಪ್ರಯತ್ನಿಸಿದೆ. ಇನ್ನುಮುಂದೆಯೂ ಸಂಘರ್ಷಗಳಾಗದAತೆ ಗೊಂದಲಗಳನ್ನು ಬಗೆಹರಿಸಿಕೊಳ್ಳೋಣ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಭರವಸೆಯ ಬಳಿಕ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಮುಖಂಡರಾದ ವಿಜಯ್ ಕೆಎಸ್, ಚಂದ್ರಮ ತಲ್ಲೂರು, ಮಂಜುನಾಥ ಗುಡ್ಡೆಯಂಗಡಿ, ರಾಘವೇಂದ್ರ ಬೈಂದೂರು, ಶಶಿ ಬಳ್ಕೂರು, ರಾಮ ಬೆಳ್ಳಾಲ, ವಸಂತ ವಂಡ್ಸೆ ಮತ್ತಿತರರು ಇದ್ದರು.


Spread the love
Subscribe
Notify of

0 Comments
Inline Feedbacks
View all comments