ದಲಿತ ಮುಖ್ಯಮಂತ್ರಿ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ

Spread the love

ದಲಿತ ಮುಖ್ಯಮಂತ್ರಿ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ

ಬೆಂಗಳೂರು: ‘ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದಲಿತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡರೆ ನನ್ನ ತಕರಾರಿಲ್ಲ’ ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಈ ಸ್ಪಷ್ಟನೆ ನೀಡಿದರು.

‘ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ರಚನೆ ಆಗುವುದಿಲ್ಲ. ನಮಗೆ ಅಖಂಡ ವಿಶ್ವಾಸ ಇದೆ. ಮತ್ತೊಮ್ಮೆ ನಾವೇ ಸರ್ಕಾರ ರಚಿಸುತ್ತೇವೆ’ ಎಂದೂ ಅವರು ಅಚಲ ಆಶಾಭಾವನೆ ವ್ಯಕ್ತಪಡಿಸಿದರು.

‘ಜೆಡಿಎಸ್ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. 2013ರಲ್ಲೂ ಪತ್ರಕರ್ತರು ನನ್ನನ್ನು ಇದೇ ರೀತಿ ಕೇಳಿದ್ದರು. ಈಗಲೂ ನಾನು ಹೇಳುತ್ತೇನೆ. ಕಾಂಗ್ರೆಸ್‌ 113ರ ಸಂಖ್ಯೆಯನ್ನು ದಾಟಿ ಸರ್ಕಾರ ರಚಿಸಲಿದೆ. ಇದರಲ್ಲಿ ಅನುಮಾನವೇ ಬೇಡ’ ಎಂದರು.

‘ಚುನಾವಣೋತ್ತರ ಸಮೀಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಆದರೆ ಕಾಂಗ್ರೆಸ್‌ ಪಕ್ಷವೇ ನಡೆಸಿರುವ ಸಮೀಕ್ಷೆ ಪ್ರಕಾರ ನಾವು ನಿಚ್ಚಳ ಬಹುಮತ ಸಾಧಿಸಲಿದ್ದೇವೆ’ ಎಂದರು.

ತಕ್ಕನಾದ ಮಾತುಗಾರಿಕೆ ಅಲ್ಲ: ‘ಪ್ರಧಾನಿ ನರೇಂದ್ರ ಮೋದಿ ತಮ್ಮ ಘನತೆಯನ್ನು ಮರೆತು ಜಿಲ್ಲಾ ಮಟ್ಟದ ರಾಜಕಾರಣಿ ರೀತಿಯಲ್ಲಿ ವಿರೋಧ ಪಕ್ಷಗಳ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಬೆಂಗಳೂರನ್ನು ಪಾಪಿಗಳ ನಗರ ಎಂದು ಹೇಳಿದ್ದಾರೆ. ಇದೆಲ್ಲಾ ಅವರ ಘನತೆಗೆ ತಕ್ಕನಾದ ನಡವಳಿಕೆ ಅಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷ ಈ ಬಾರಿ ಅತ್ಯಂತ ಸಕಾರಾತ್ಮಕ ಮತ್ತು ಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿದೆ. ಎಲ್ಲೂ ಯಾರ ವಿರುದ್ಧವೂ ಹಗುರವಾಗಿ ಅಥವಾ ಚುನಾವಣೋತ್ತರ ಹೊಂದಾಣಿಕೆ ಉದ್ದೇಶ ಇರಿಸಿಕೊಂಡು ಮುಗುಮ್ಮಾಗಿ ಮಾತನಾಡಿಲ್ಲ. ಸಮಯ ಬಂದಾಗ ಜೆಡಿಎಸ್‌ ಮುಖಂಡರಾದ ಎಚ್‌.ಡಿ. ದೇವೇಗೌಡರು ಹಾಗೂ ಎಚ್‌.ಡಿ.ಕುಮಾರ ಸ್ವಾಮಿ ಅವರ ಮಾತುಗಳನ್ನೂ ಖಂಡಿಸಿದ್ದೇವೆ’ ಎಂದರು.

‘ಹೈಕಮಾಂಡ್‌ ನಿರ್ದೇಶನದ ಅನುಸಾರ ಇದೇ 16ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದೆಲ್ಲಾ 15ರ ಸಂಜೆಗೆ ಆಖೈರಾಗಲಿದೆ’ ಎಂದರು.


Spread the love