ದಸಂಸ ಭೀಮಘರ್ಜನೆಯಿಂದ ಸಂವಿಧಾನಾರ್ಪಣಾ ದಿನ
ಉಡುಪಿ: ಬನ್ನಂಜೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಸಮಿತಿ ವತಿಯಿಂದ ಸಂವಿಧಾನಾರ್ಪಣೆ ದಿನಾಚರಣೆ, ನೀಲಿಸೇನೆ ಪಥಸಂಚಲನ ನಡೆಯಿತು. ಆ ಪ್ರಯುಕ್ತ ತಾಲ್ಲೂಕು ಪಂಚಾಯಿತಿಯಿಂದ ಬನ್ನಂಜೆಯ ನಾರಾಯಣಗುರು ಸಭಾಭವನಕ್ಕೆ ನೀಲಿ ಸೇನಾನಿಗಳ ಉಡುಪಿ ಚಲೋ ರ್‍ಯಾಲಿ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ನನ್ನ ಮಗ 6ನೇ ತರಗತಿಯಲ್ಲಿರುವಾಗಲೇ ಅಂಬೇಡ್ಕರ್ ಬಗ್ಗೆ ಓದುತ್ತಾ ಅವರ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದಾನೆ. ನಾವೆಲ್ಲಾ ಈ ಮಟ್ಟಕ್ಕೆ ಬೆಳೆಯಲು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದರ್ಶನಗಳೇ ಕಾರಣ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಅಂಬೇಡ್ಕರ್ ಎಂಬುವುದು ಒಂದು ಶಕ್ತಿ. ದೇಶದಲ್ಲಿ ಸಮಾನತೆಗೆ ಕಾರಣವಾಗಿರುವ ಸಂವಿಧಾನಾರ್ಪಣೆ ದಿನವನ್ನು ಹಬ್ಬವಾಗಿ ಎಲ್ಲೆಡೆ ಆಚರಿಸುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸುವ ಕಾರ್ಯಗಳು ನಡೆಯುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ‌್ದ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಸಂಘಟನೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.
ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಅವರಿಗೆ ಬುದ್ಧ ಬಸವ ಅಂಬೇಡ್ಕರ್ ರಾಜ್ಯ ಪ್ರಶಸ್ತಿ, ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ವಿಭಾಗ ಸಂಚಾಲಕ ಮುನಿರಾಜು ಎ, ಸಮಾಜ ಸೇವಕ ಕೃಷ್ಣಕುದ್ರು ಬೇರುಕಟ್ಟೆ ಆಜ್ರಿ, ಅಂತರರಾಷ್ಟ್ರೀಯ ದೇಹಧಾರ್ಢ್ಯ ಪಟು ಸತೀಶ್ ಖಾರ್ವಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ಅವರಿಗೆ ಭೀಮರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್.ಎಸ್, ನವದೆಹಲಿಯ ಸಮಾಜ ಸೇವಕಿ ಗೀತಾ ಪ್ಯಾಟ್ರಿಕ್, ನೀಲಿಸೇನೆ ರಾಜ್ಯಾಧ್ಯಕ್ಷ ಸದ್ದಾಂ ಹುಸೇನ್, ರಾಜ್ಯ ಸಮಿತಿ ಸದಸ್ಯರಾದ ದೊಡ್ಡಪ್ಪ ಪೂಜಾರ್, ಕೃಷ್ಣಪ್ಪ ಕೋಲಾರ್, ಯಾದಗಿರಿ ಜಿಲ್ಲಾ ಸಂಚಾಲಕ ಮಾನಪ್ಪ ಕಲ್ಲದೇವನಹಳ್ಳಿ, ಬೆಂಗಳೂರು ನಗರ ಜಿಲ್ಲಾ ಸಂಚಾಲಕ ಮುನಿರಾಜು ಟಿ.ಎಂ., ವಿಜಯಪುರ ಜಿಲ್ಲಾ ಸಂಚಾಲಕ ಸುರೇಶ್ ಸಿಂಘ, ಬಳ್ಳಾರಿ ಜಿಲ್ಲಾ ಸಂಚಾಲಕ ಹುಲುಗಪ್ಪ ಕಸಗಲು, ಕಲಾಮಂಡಳಿ ಸಂಚಾಲಕ ತುಕಾರಾಮ್ ನಾಮದೇವ ಸಿಂಘೆ, ವಿಠಲ ಸಾಲಿಕೇರಿ, ಸುಂದರ್ ನೀರೆ, ಪ್ರಶಾಂತ್ ಉಡುಪಿ, ಮಂಜುನಾಥ ಗುಡ್ಡೆಯಂಗಡಿ, ಸುರೇಂದ್ರ ಬಜಗೋಳಿ, ಸುಧಾಕರ್ ಸೂರ್ಗೋಳಿ, ಪ್ರಮೋದ ಕಾಡೆಬೆಟ್ಟು, ಕೃಷ್ಣಮ್ಮ ಬಡಗೇರ್ ಯಾದಗಿರಿ ಇದ್ದರು.
ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯ ಖಜಾಂಚಿ ರಾಜು ಸರಿಕೆರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ಸ್ವಾಗತಿಸಿದರು. ಶೈಲಾ ಜಾಲವಾದಿ ಬಿಜಾಪುರ ವಂದಿಸಿದರು. ದಲಿತ ಕಲಾಮಂಡಳಿ ರಾಜ್ಯ ಸಂಚಾಲಕ ಸಿದ್ದುಮೇಲಿನಮನೆ ನಿರೂಪಿಸಿದರು.