ದಾಖಲೆಯಾದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ! ಸಂಜನಾ ಮುಡಿಗೆ ಪರಿವರ್ತನಾ ಟ್ರಾನ್ಸ್ ಕ್ವೀನ್ ಕಿರೀಟ
ಮಂಗಳೂರು: ದೇಶದಲ್ಲೇ ದ್ವಿತೀಯ ಹಾಗೂ ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಪರಿವರ್ತನಾ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳಮುಖಿ ಕಾರವಾರ ಸಮೀಪದ ದಾಂಡೆಲಿಯ ಸಂಜನಾ ಅವರು ಮೊದಲ ಸ್ಥಾನ ಪಡೆಯುವ ಮೂಲಕ ಪರಿವರ್ತನಾ ಟ್ರಾನ್ಸ್ ಕ್ವೀನ್ – 2018 ಪಟ್ಟವನ್ನು ಅಲಂಕರಿಸಿದರು.
ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಪರಿವರ್ತಾನಾ ಚಾರೀಟೇಬಲ್ ಟ್ರಸ್ಟ್, ಮ್ಯಾಂಗಲೋರಿಯನ್.ಕಾಮ್, ಫ್ಯಾಷನ್ ಎಬಿಸಿಡಿ ಹಾಗೂ ವಿ4 ನ್ಯೂಸ್ ಚಾನೆಲ್ ವತಿಯಿಂದ ಆಯೋಜಿಸಿದ ಪರಿವರ್ತನಾ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಒಟ್ಟು11 ಮಂದಿ ಸ್ಪರ್ಧಾಳುಗಳಲ್ಲಿ 10 ಮಂದಿಯನ್ನು ಎಲ್ಲಾ ವಿಭಾಗಗಳಲ್ಲಿ ಹಿಂದಿಕ್ಕಿ ಪರಿವರ್ತನಾ ಟ್ರಾನ್ಸ್ ಕ್ವೀನ್ – 2018 ಆಗಿ ಮೂಡಿ ಬಂದರು. ಅಲ್ಲದೆ ಗುಲ್ಬರ್ಗಾದ ಝೋಯಾ ಶೇಖ್ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಹಿರಿಯ ಜೆಡಿಎಸ್ ನಾಯಕರಾದ ಅಮರನಾಥ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿ “ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಇದುವರೆಗೆ ಯಾರೂ ಕೂಡ ಮಾಡಲು ಮುಂದೆ ಬಂದಿಲ್ಲ ಆದರೆ ವಾಯ್ಲೆಟ್ ಪಿರೇರಾ ಅವರು ಮಂಗಳಮುಖಿಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು ಬಳ್ಳಾರಿಯ ಶ್ರೀನಿಧಿ ಎಂಬ ನಿಟ್ಟಿನಲ್ಲಿ ಅಹರ್ನಿಸಿ ಶ್ರಮವಹಿಸುತ್ತಿದ್ದು ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದು. ಇಂತಹ ಅತ್ಯುತ್ತಮವಾದ ಒಂದು ಕೆಲಸಕ್ಕೆ ಸಮಾಜ ಹಾಗೂ ನಾಯಕರುಗಳು ಪ್ರೋತ್ಸಾಹ ನೀಡಿದಾಗ ಮಾತ್ರ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದರು”
ಈ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿಗಳು ಆಗಮಿಸಬೇಕಾಗಿತ್ತು ಆದರೆ ಅವರ ವಿಮಾನ ಒಂದು ಗಂಟೆ ವಿಳಂಬವಾಗಿ ಆಗಮಿಸಿದ್ದು ಕಾರ್ಯಕ್ರಮಗಳ ಒತ್ತಡದಿಂದಾಗಿ ಬರಲು ಅಸಾಧ್ಯವಾಗಿಲ್ಲ ಅದಕ್ಕಾಗಿ ಅವರ ಪರವಾಗಿ ಕ್ಷಮೆಯನ್ನು ಕೋರುತ್ತಾ ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತಿರಸ್ಕರಿಸಲ್ಪಟ್ಟವರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಮಂಗಳಮುಖಿಯರಾದ ದಾಂಡೇಲಿಯ ಸಂಜನಾ, ಗುಲ್ಬರ್ಗಾದ ಝೋಯಾ ಶೇಖ್, ಮಂಗಳೂರಿನ ಸುಭದ್ರ ಪೂಜಾರಿ, ಮೈಸೂರಿನ ಅರುಂಧತಿ, ಬಳ್ಳಾರಿಯ ಶ್ರೀನಿಧಿ, ಮಂಡ್ಯದ ಅರುಂಧತಿ, ಬಳ್ಳಾರಿಯ ಸಂಧ್ಯಾ, ಬೆಂಗಳೂರಿನ ಪ್ರೀಯಾ, ಬಳ್ಳಾರಿಯ ರೇಖಾ, ಶಿವಮೊಗ್ಗದ ಅನು, ಬೆಂಗಳೂರಿನ ಶ್ವೇತಾ ಭಾಗವಹಿಸಿದ್ದರು.
ನೂರಾರು ಕನಸುಗಳನ್ನು ಹೊತ್ತು ಆಗಮಿಸಿದ್ದ 11 ಮಂದಿ ಮಂಗಳಮುಖಿಯರು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ರ್ಯಾಂಪ್ ಮೇಲೆ ಆಕರ್ಷಕ ಪ್ರದರ್ಶನ ನೀಡಿದರು. ಅಲ್ಲದೆ, ಅತ್ಯಂತ ಆತ್ಮವಿಶ್ವಾಸದೊಂದಿಗೆ ಪರಿವರ್ತನಾ ಟ್ರಸ್ಟ್ ಕಲ್ಪಿಸಿದ ವೇದಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಿಂದ ಒಟ್ಉ 40ಕ್ಕೂ ಅಧಿಕ ಮಂಗಳಮುಖಿಯರು ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿದ್ದರು. ಈ ಪೈಕಿ ಆಯ್ದ 11 ಮಂಗಳಮುಖಿಯರನ್ನು ಆಯ್ಕೆಮಾಡಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಕಲ್ಪಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಾರಿ ಹಾಗೂ ವೆಸ್ಟರ್ನ್ ಉಡುಪು ತೊಟ್ಟ ಮಂಗಳಮುಖಿಯರು ರ್ಯಾಂಪ್ ಮೇಲೆ ವಯ್ಯಾರದ ನಡಿಗೆ ಹಾಕುತ್ತ ಆತ್ಮವಿಶ್ವಾಸದೊಂದಿಗೆ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡರು.
ಈ 11 ಮಂದಿ ಮಂಗಳಮುಖಿ ರೂಪದರ್ಶಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾಗ ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿನ ಪ್ರೇಕ್ಷಕರು ಚಪ್ಪಾಳೆ, ವಿಶಿಲ್ ಹಾಕುವ ಮೂಲಕ ಸ್ಪರ್ಧೆಗೆ ಕಳೆ ನೀಡಿದರು. ಬಳುಕುವ ಬಳ್ಳಿಯ ಬೆಡಗಿಯರಿಂದ ಮೂಡಿಬಂದ ಕ್ಯಾಟ್ ವಾಕ್ ಸುಂದರ ಸಂಜೆಗೆ ಮತ್ತಷ್ಟು ಮೆರುಗು ನೀಡಿದಂತಿತ್ತು. 11 ಮಂದಿ ಸ್ಪರ್ಧಾಳುಗಳು ಮೂರು ವಿಭಾಗದಲ್ಲಿ ಅಂದರೆ ಟ್ರೆಡೀಶನಲ್ ಅಥವಾ ಸಾಂಪ್ರಾದಾಯಿಕ ಉಡುಗೆ, ಎರಡನೇಯದಾಗಿ ಕ್ಯಾಶುವಲ್ ರೌಂಡ್ ಹಾಗೂ ಕೊನೆಯದಾಗಿ ಇವ್ನಿಂಗ್ ಗೌನ್ ಹಾಕಿಕೊಂಡು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು.
ತೀರ್ಪುಗಾರರಾಗಿ 2017 ಮಿಸ್ ಇಂಡಿಯಾ ಆಗಿದ್ದ ಜೋಯ್ಸ್ ರೇಗೊ, 2018 ದಿವಾ ಮಿಸ್ ಇಂಡಿಯಾ ರಿಪ್ಪಲ್ ರೈ, ಸೆನ್ಸಾರ್ ಬೋರ್ಡಿನ ಶ್ರೀನಿವಾಸ್ ಗುರ್ಜಾಲ್ ಮತ್ತು ಪಂಡಿತ್ ರೆಸಾರ್ಟ್ ಇದರ ಗೋಯೆಲ್ ಆಗಮಿಸಿದ್ದರು. ತೀರ್ಪುಗಾರರು ವಿವಿಧ ಪ್ರಶ್ನೆ ಕೇಳುವ ಮೂಲಕ ಸ್ಪರ್ಧಾಳುಗಳ ಆತ್ಮವಿಶ್ವಾಸ, ಬುದ್ಧಿಮತ್ತೆ, ಚಾಕಚಕ್ಯತೆ ಮತ್ತು ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚುವ ಯತ್ನ ಮಾಡಿದರು. ಸ್ಪರ್ಧಾಳುಗಳು ತೀರ್ಪುಗಾರರ ಪ್ರಶ್ನೆಗೆ ದಿಟ್ಟತನದಿಂದಲೇ ಉತ್ತರ ನೀಡಿದರು. ಅಂತಿಮವಾಗಿ ವಿಜೇತರ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಸಭಿಕರ ಹರ್ಷ ಮುಗಿಲು ಮುಟ್ಟಿತು.
ನಂತರ ಅಂತಿಮ ಸ್ಪರ್ಧೆಯಲ್ಲಿ ದಾಂಡೆಲಿಯ ಮಂಗಳಮುಖಿ ಸಂಜನಾ ಅವರು ಪರಿವರ್ತನಾ ಟ್ರಾನ್ಸ್ ಕ್ವೀನ್ – 2018 ಕಿರೀಟ ಧರಿಸುವಲ್ಲಿ ಯಶಸ್ವಿಯಾದರು. ಗುಲ್ಬರ್ಗಾದ ಝೋಯಾ ಶೇಖ್ ಪ್ರಥಮ ರನ್ನರ್ ಅಪ್ ಹಾಗೂ ಬಳ್ಳಾರಿಯ ಶ್ರೀನಿಧಿ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಪರಿವರ್ತನಾ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯ ಪ್ರಮುಖ ರೂವಾರಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಮುಖ್ಯಸ್ಥೆ ವಾಯ್ಲೆಟ್ ಪಿರೇರಾ, ಫ್ಯಾಷನ್ ಎಬಿಸಿಡಿ ಇದರ ಚರಣ್ ಸುವರ್ಣ, ನಟಿ ಸೋನಾಲ್ ಮೊಂತೆರೋ, ವಿ4 ಇದರ ಲಕ್ಷ್ಮಣ್ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಂಡು ಕಾರ್ಯಕ್ರಮಕ್ಕೆ ನಾಪತ್ತೆಯಾದ ಗಣ್ಯರುಗಳು!
ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಸೇರಿದಂತೆ 18 ಮಂದಿಯ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ನಮೂದಾಗಿದ್ದರೂ ಕೂಡ ಅವರಲ್ಲಿ ಒಬ್ಬರೂ ಕೂಡ ಆಗಮಿಸದೆ ಇದ್ದಿರುವುದು ಮಂಗಳಮುಖಿಯರ ಏಳಿಗೆಯ ಕುರಿತು ಇವರಿಗಳಿಗೆ ಇರುವ ಕಾಳಜಿಯನ್ನು ಏತ್ತಿ ತೋರಿಸುತ್ತಿತ್ತದೆ ಎಂದು ಭಾಗವಹಿಸಿದ ಪ್ರೇಕ್ಷಕರು ಆಡಿಕೊಳ್ಳುತ್ತಿದ್ದರು. ಕೇವಲ ಭಾಷಣಗಳಲ್ಲಿ ಮಾತ್ರ ಮಂಗಳಮುಖಿಯರ ಅಭಿವೃದ್ಧಿಯ ಕುರಿತು ಮಾತನಾಡುವ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗ ರಾಜ್ಯದಲ್ಲಿಯೇ ಮೊದಲಾಗಿ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಾಡಿದ ಪ್ರಯತ್ನದಲ್ಲಿ ರಾಜ್ಯದ ಆಡಳಿತ ವರ್ಗ ಹಾಗೂ ಅಧಿಕಾರಿ ವರ್ಗ ಕೈಜೋಡಿಸದೇ ಇರುವುದು ಸಭಾಂಗಣದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಬೇಸರ ತಂದಿರಿಸಿದರೆ, ಕೊನೆಯಗಳಿಗೆಯಲ್ಲಿ ಕಾರ್ಯಕ್ರಮದ ಮಾಹಿತಿ ಪಡೆದು ಆಗಮಿಸಿದ ಹಿರಿಯ ರಾಜಕಾರಣಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಜೆಡಿಎಸ್ ವಕ್ತಾರ ಸುಶೀಲ್ ನೊರೋನ್ಹಾ ಜೊತೆಗೆ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.