ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿಗೆ ಕೊರೊನಾ ವೈರಸ್ ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೋರಾನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 39ಕ್ಕೆ ಏರಿದೆ. ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಇಂದು ಭಾರೀ ಎಚ್ಚರಿಕೆ ಗಂಟೆ ಭಾರಿಸಿದ್ದು, ಆರಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿದೆ. ಕೋಟೆಕೊತ್ತಲಗಳ ನಾಡು ಚಿತ್ರದುರ್ಗಕ್ಕೂ ಕೊರೋನಾ ಲಗ್ಗೆಯಿಟ್ಟಿದ್ದು, ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿಗೆ ಕರೋನಾ ಸೋಂಕು ದೃಢಪಟ್ಟಿದೆ.
ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದ ಮನೆಯಲ್ಲಿರುವ ಜಿ.ಎಂ ಸಿದ್ದೇಶ್ವರ ಪುತ್ರಿ ಸೇರಿದಂತೆ ಆರು ಜನ ಕೆಲ ದಿನಗಳ ಹಿಂದೆ ಗಯಾನದಿಂದ ಭಾರತಕ್ಕೆ ಬಂದಿದ್ದರು. ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಭೀಮಸಮುದ್ರದ ಜಿಎಂ ಸಿದ್ದೇಶ್ವರ ಮನೆ ಸುತ್ತಲೂ 5 ಕಿಲೋಮೀಟರ್ ರೆಡ್ ಝೋನ್ ಗುರುತಿಸಲಾಗಿದ್ದು, ರೆಡ್ ಝೋನ್ ಅಲ್ಲಿರುವ ಮನೆಯವರು ಯಾರೂ ಹೊರ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.
ಇನ್ನು ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ 6 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಪೈಕಿ 4 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ ಇಬ್ಬರ ವರದಿ ಬಾಕಿ ಇದೆ. ಸೋಂಕಿತ ಮಹಿಳೆ ಜೊತೆ ಮಕ್ಕಳು ಇದ್ದರಾದರೂ ಮಕ್ಕಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದರು.
ಕರಾವಳಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತೀವ್ರವಾಗಿದೆ. ಮಂಗಳೂರಿನಲ್ಲಿ ಇಂದು 4 ಮಂದಿಗೆ ಕೊರೋನಾ ದೃಢಪಟ್ಟಿದೆ. ಇವರಲ್ಲಿ 3 ಮಂದಿ ಮಂಗಳೂರಿನ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿದ ವಿಮಾನದ ಸಹ ಪ್ರಯಾಣಿಕರಾಗಿದ್ದವರು. ಕೊರೋನಾ ಸೋಂಕು ದೃಢಪಟ್ಟವರಲ್ಲಿ 3 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಒಬ್ಬರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಎರಡು ಕೊರೋನಾ ಸೋಂಕು ಇರುವುದು ಋಜುವಾತಾಗಿದೆ. ದುಬೈನಿಂದ ಬಂದ ಇವರಲ್ಲಿ ವೈರಾಣು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಅವರು ಹೇಳಿದರು.
40 ವರ್ಷದ ಭಟ್ಕಳ್ ಮೂಲದ ವ್ಯಕ್ತಿಯು ದುಬೈನಿಂದ ಮಾ.21 ರಂದು ಮಂಗಳೂರಿನಲ್ಲಿ ವಿಮಾನದ ಮೂಲಕ ಬೆಳಿಗ್ಗೆ 6:30 ಕ್ಕೆ ಬಂದಿಳಿದರು. ಬಳಿಕ ತಮ್ಮ ಸಂಬಂಧಿಕರೊಬ್ಬರ ಸ್ವಂತ ಕಾರಿನಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು, ಮಧ್ಯಾಹ್ನದ ಹೊತ್ತಿಗೆ ಸ್ವಯಂ ಪ್ರೇರಿತರಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ಆ ವ್ಯಕ್ತಿಯ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾ.23 ಸೋಮವಾರ ರಾತ್ರಿ ವರದಿ ಬಂದಿದ್ದು, ಸೊಂಕು ಇರುವುದು ದೃಢಪಟ್ಟಿದೆ. ಇನ್ನೋರ್ವ ವ್ಯಕ್ತಿಯು 65 ವರ್ಷ ವಯಸ್ಸಿನವನಾಗಿದ್ದು, ಭಟ್ಕಳ್ ಮೂಲದವನಾಗಿದ್ದಾನೆ ಎಂದರು.
ಈ ಇಬ್ಬರು ವ್ಯಕ್ತಿಗಳ ಸಂಪರ್ಕದಲ್ಲಿದ್ದವರನ್ನು ಜಿಲ್ಲಾಡಳಿತವು ಪತ್ತೆ ಹಚ್ಚುತ್ತಿದ್ದು, ಭಟ್ಕಳ ಪಟ್ಟಣವನ್ನು ಕ್ಲಸ್ಟರ್ ಎಂದೂ ಪರಿಗಣಿಸಲಾಗಿದೆ. ಅಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ರೋಶನ್ ಅವರು ಈಗಾಗಲೇ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಭಟ್ಕಳ ಪಟ್ಟಣವನ್ನು ಈಗಾಗಲೇ ಲಾಕ್ ಡೌನ್ ಮಾಡಲಾಗಿದ್ದು, ಜೀವನಾವಶ್ಯಕ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮನೆ ಮನೆಗೆ ತೆರಳಿ ಅತ್ಯಗತ್ಯ ವಸ್ತುಗಳನ್ನು ಜಿಲ್ಲಾಡಳಿತದಿಂದಲೇ ಪೂರೈಸುವ ಕಾರ್ಯ ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಸೋಂಕು ದೃಢಪಟ್ಟಿದೆ. ತಾಯಿ ಸಹೋದರನ ಜೊತೆ ಮೆಕ್ಕಾ ಗೆ ತೆರಳಿದ್ದ ಮಹಿಳೆಗೆ ಸೋಂಕು ತಗಲಿದೆ. ಈಕೆಗೆ ಸಧ್ಯ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್ ಗೆ ಈಕೆಯನ್ನು ದಾಖಲಿಸಲಾಗಿದೆ.
ಮಾರ್ಚ್ 14 ರಂದು ಮೆಕ್ಕಾ ದಿಂದ ಹೈದರಾಬಾದ್ ಗೆ ಆಗಮಿಸಿದ್ದ ಈ ಮಹಿಳೆ ಮಾರ್ಚ್ 16 ರಂದು ಬೆಳಿಗ್ಗೆ ಗೌರಿಬಿದನೂರಿಗೆ ಬಂದಿದ್ದರು. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಮೂರು ಕೊರೋನಾ ಸೋಂಕಿತರು ಪತ್ತೆಯಾಗಿದೆ.
ಇನ್ನು ಬೆಂಗಳೂರಿನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಈ ವರೆಗೂ 14, 910 ಮಂದಿಯನ್ನು ಇರಿಸಲಾಗಿದೆ.