ದೀಪಕ್ ಅಂತ್ಯ ಸಂಸ್ಕಾರ: ಸೋದರನಿಂದ ಅಗ್ನಿ ಸ್ಪರ್ಶ
ಮಂಗಳೂರು: ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಅವರ ಮೃತದೇಹದ ಅಂತ್ಯಕ್ರಿಯೆ ಕಾಟಿಪಳ್ಳದ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು.
ಬೆಳಗ್ಗೆಯಿಂದ ಇದ್ದ ಗೊಂದಲದ ವಾತಾವರಣದ ನಡುವೆಯೂ ಜಿಲ್ಲಾಧಿಕಾರಿ ಅವರ ಮನವೊಲಿಕೆ ಯಸ್ವಿಯಾದ ಬಳಿಕ ಕಾಟಿಪಳ್ಳದ ಮನೆಯಿಂದ ಸುಮಾರು ಮುಕ್ಕಾಲು ಕಿ.ಮೀ. ದೂರದಲ್ಲಿರುವ ರುದ್ರಭೂಮಿಯಲ್ಲಿ ಮಧ್ಯಾಹ್ನ 2.20ರ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಿತು. ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಕಿರಿಯ ಸಹೋದರ ಸತೀಶ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಇದಕ್ಕೂ ಮೊದಲು ದೀಪಕ್ ಅವರ ಮೃತದೇಹದ ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥೀಲ್ ಅನುಮತಿ ನೀಡಿದ್ದರು. ಅದರಂತೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಆರಂಭಗೊಂಡ ಮೃತದೇಹದ ಮೆರವಣಿಗೆಯು ಸುಮಾರು 6 ಕಿ.ಮೀ. ದೂರದವರೆಗೆ ಸಾಗಿ ಮಧ್ಯಾಹ್ನ 1:45ರಸುಮಾರಿಗೆ ಕಾಟಿಪಳ್ಳ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿ ತಲುಪಿತು.
ಮನೆಯಿಂದ ಗಣೇಶ್ ಪುರವರೆಗೆ 3 ಕಿಲೋ ಮೀಟರ್ ಶವಯಾತ್ರೆ ನಡೆದ ಬಳಿಕ ಅಂತ್ಯ ಸಂಸ್ಕಾರ ನಡೆಯಿತು. ಶವಯಾತ್ರೆ ಹೊರಡುವಾಗ ರೋಧಿಸುತ್ತಿದ್ದ ಕುಟುಂಬದವರಿಗೆ ಡಿಸಿ ಸಾಂತ್ವನ ಹೇಳಿದರು.