ದೀಪಕ್ ರಾವ್ ಕೊಲೆ ಖಂಡಿಸಿ ಉಡುಪಿಯಲ್ಲಿ ಹಿಂದೂ ಸಂಘಟನೆಗಳು, ಬಿಜೆಪಿ ರಾಸ್ತಾ ರೋಕೊ; ಬಂಧನ
ಉಡುಪಿ: ಸುರತ್ಕಲ್ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಬುಧವಾರ ಹತ್ಯೆಗೀಡಾದ ದೀಪಕ್ ರಾವ್ ಕೊಲೆ ಖಂಡಿಸಿ, ಮತೀಯವಾದಿ ಸಂಘಟನೆಗಳಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸುವಂತೆ ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಸಂಘಟನೆಗಳು ಶುಕ್ರವಾರ ಉಡುಪಿಯಲ್ಲಿ ರಾಸ್ತಾರೋಕೊ ನಡೆಸಿದರು.
ನಗರದ ಕ್ಲಾಕ್ ಟವರ್ ಬಳಿಯಿಂದ ಮೆರವಣಿಗೆ ಮೂಲಕ ತ್ರೀವೇಣಿ ಸರ್ಕಲ್ ಬಳಿ ಬಂದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಬಳಿಕ ರಸ್ತೆ ತಡೆ ನಡೆಸಲು ಹೊರಟಾಗ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಪೋಲಿಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಪ್ರತಿಭಟನೆಯಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಜಿಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ನಗರ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಹಿಂದೂ ಸಂಘಟನೆಗಳ ನಾಯಕರಾದ ದಿನೇಶ್ ಮೆಂಡನ್, ಸಂತೋಶ್ ಸುವರ್ಣ ಬೊಳ್ಜೆ ಹಾಗೂ ಇತರರು ಭಾಗವಹಿಸಿದ್ದರು.