ದೀಪಾವಳಿ ಅಜ್ಞಾನದ ಕತ್ತಲನ್ನು ಹೋಗಲಾಡಿಸಲಿ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

Spread the love

ದೀಪಾವಳಿ ಅಜ್ಞಾನದ ಕತ್ತಲನ್ನು ಹೋಗಲಾಡಿಸಲಿ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ದೀಪಗಳ ಹಬ್ಬ ದೀಪಾವಳಿ ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಪ್ರತಿಯೊಬ್ಬರಲ್ಲಿ ಬೀರಲಿ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಬಿಷಪ್ ಹೌಸ್, ಭಾರತದ ಸಂಸ್ಕøತಿಯಲ್ಲಿ ವಿಶಿಷ್ಟವಾದ ಹಲವು ಹಬ್ಬಗಳಿವೆ. ಸಾಂಸ್ಕೃತಿಕವಾಗಿ ಸಂಬಂಧಗಳನ್ನು ಒಗ್ಗೂಡಿಸುವ ಮತ್ತು ಉಳಿಸುವ ಪ್ರಯತ್ನ ಈ ಯಾಂತ್ರಿಕ ಜೀವನದಲ್ಲಿ, ಕನಿಷ್ಟ ಹಬ್ಬಗಳ ಮೂಲಕವಾದರೂ ಉದ್ದೀಪನಗೊಳಿಸುವ ದಿಸೆಯಲ್ಲಿ, ನಮ್ಮ ಸಂಸ್ಕೃತಿಯ ಕೊಡುಗೆ ಅಪಾರ. ಹಬ್ಬಗಳನ್ನು ನಾವು ಸಡಗರ-ಸಂಭ್ರಮದಿಂದ ಆಚರಿಸುತ್ತೇವಾದರೂ ಅವುಗಳ ಆಚರಣೆಯ ಹಿನ್ನೆಲೆಯ ಅರಿವು ಇಲ್ಲದೆ, ಬರಿಯೇ ಬಾಹ್ಯ ಆಚರಣೆಗಳ ಮೂಲಕ ಸಮಯವನ್ನು ಕಳೆದು, ಅಮೂಲ್ಯವಾದ ಸಾಂಸ್ಕೃತಿಕ ಆಚರಣೆಗಳ ಮಹತ್ವವನ್ನು ನಾವು ಬದಿಗೊತ್ತಿರುವುದು ವಾಸ್ತವಿಕ ಸಂಗತಿಯಾಗಿದೆ.

ದೀಪಾವಳಿ – ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ದೀಪಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. `ತಮಸೋಮಾ ಜ್ಯೋತಿರ್ಗಮಯ’ ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯನ್ನು ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ. ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತು ಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮ, ಸಡಗರದ ವಾತಾವರಣ ಮನೆಯಲ್ಲಿ ಸಂತೋಷವನ್ನು ತುಂಬುತ್ತವೆ. ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ (ಪ್ರಕಾಶ) ಅವಶ್ಯಕ. ಆದ್ದರಿಂದಲೇ `ನ ಜ್ಞಾನೇನ ಸದೃಶಂ’ (ಜ್ಞಾನಕ್ಕೆ ಸಮವಾದುದು ಯಾವುದೂ ಇಲ್ಲ) `ಜ್ಞಾನ ನಃ ಪಶು: (ಜ್ಞಾನವಿಲ್ಲದವನು ಪಶುವಿಗೆ ಸಮಾನ) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ.

ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದವನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ. ಸುಖ ಶಾಂತಿ, ನಲಿವು, ಜ್ಞಾನದ ಸೌಹಾರ್ದತೆಯ ಸಂಕೇತವಾದ ದೀಪಾವಳಿಯನ್ನು ಆತ್ಮದೀಪವ ಬೆಳಗಿಸಿ ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೋಣ ಎಂದು ಹೇಳಿದ್ದಾರೆ.


Spread the love