ದೀಪಿಕ ಪಡುಕೋಣೆ ಶಿರಭೇಧನ ಹೇಳಿಕೆ ನೀಡಿದ ಹರ್ಯಾಣ ಬಿಜೆಪಿ ನಾಯಕನ ವಿರುದ್ದ ಎನ್.ಎಸ್.ಯು.ಐ ಆಕ್ರೋಶ
ಉಡುಪಿ: ಖ್ಯಾತ ಚಲನಚಿತ್ರ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಅವರ “ಪದ್ಮಾವತಿ” ಚಲನಚಿತ್ರದ ನಾಯಕಿಯಾಗಿ ಪಾತ್ರ ನಿರ್ವಹಿಸಿರುವ ಕನ್ನಡದ ಹೆಣ್ಣುಮಗಳು ದೀಪಿಕ ಪಡುಕೋಣೆ ಅವರ ಶಿರಭೇಧನಕ್ಕೆ 10 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಹರಿಯಾಣದ ಆಡಳಿತಾರೂಢ ಬಿಜೆಪಿ ಮುಖಂಡ, ಮುಖ್ಯ ಮಾಧ್ಯಮ ಸಂಚಾಲಕ ಸೂರಜ್ ಪಾಲ್ ಅಮು ಘೋಷಣೆ ಮಾಡಿರುವುದು ಭಾರತದ ಸಂವಿಧಾನ ಕೊಡಮಾಡಿರುವ ಪ್ರತಿ ನಾಗರೀಕನ ಸ್ರಜನಶೀಲ ಸ್ವಾತಂತ್ರ್ಯದ ಮೇಲೆ ಮಾಡಿರುವ ಹಲ್ಲೆಯಾಗಿರುತ್ತದೆ.
ರಾಷ್ಟ್ರದ ಪ್ರಜ್ಞಾವಂತ ಜನತೆ ಬಿ.ಜೆ.ಪಿ. ನಾಯಕರ ಈ ರೀತಿಯ ಫ್ಯಾಸಿಸ್ಟ್ ಮನೋಭಾವನೆಯನ್ನು ತೀವ್ರವಾಗಿ ಖಂಡಿಸಬೇಕಾಗಿದೆ. ಬಿಜೆಪಿ ನಾಯಕರ ಈ ಘೋಷಣೆಯನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸಿದೆ.ತಮ್ಮ ಮೌನ ವರ್ತನೆಯಿಂದ ರಾಜ್ಯದ ಬಿ.ಜೆ.ಪಿ. ನಾಯಕರು ಇಂತಹ ಅಮಾನವೀಯ ಘೋಷಣೆಗಳಿಗೆ ಬೆಂಬಲ ನೀಡುತ್ತಿರುವುದು ಮತ್ತೂ ಖಂಡನೀಯ ವಿಷಯವಾಗಿದೆ. ಸಿನಿಮಾ ಬಗ್ಗೆ ಆಕ್ಷೇಪವಿದ್ದರೆ ಸಿಬಿಎಫ್‍ಸಿ ಮೊರೆ ಹೋಗಬೇಕು. ಅದು ಬಿಟ್ಟು ಕಲಾವಿದರಿಗೆ ಬೆದರಿಕೆ ಹಾಕುವುದು ಯಾಕೆ? ಇದೇನಾ ಬಿಜೆಪಿ ಸಂಸ್ಕೃತಿ? ಮಹಿಳೆಯರಿಗೆ ತೋರಿಸುವ ಗೌರವ ಇದೇನಾ? ಬಿಜೆಪಿ ಮುಖಂಡನ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಎಸ್.ಯು.ಐ ಉಡುಪಿ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಆಗ್ರಹಿಸುತ್ತಿದ್ದಾರೆ.