Home Mangalorean News Gulf News “ದುಬೈಯಲ್ಲಿ ಪಟ್ಲ ಸಂಭ್ರಮ 2019” ಮತ್ತು “ಸಾಧನಾ ಸಂಭ್ರಮ-ಯಕ್ಷಾರಾಧನಾ -2019” ರ ಮುಹೂರ್ತ ಪೂಜೆ

“ದುಬೈಯಲ್ಲಿ ಪಟ್ಲ ಸಂಭ್ರಮ 2019” ಮತ್ತು “ಸಾಧನಾ ಸಂಭ್ರಮ-ಯಕ್ಷಾರಾಧನಾ -2019” ರ ಮುಹೂರ್ತ ಪೂಜೆ

Spread the love

“ದುಬೈಯಲ್ಲಿ ಪಟ್ಲ ಸಂಭ್ರಮ 2019” ಮತ್ತು “ಸಾಧನಾ ಸಂಭ್ರಮ-ಯಕ್ಷಾರಾಧನಾ -2019” ರ ಮುಹೂರ್ತ ಪೂಜೆ

ಇದೇ 2019 ಜೂನ್ ತಿಂಗಳ 28 ರಂದು ದುಬೈ ಯಲ್ಲಿ ಪ್ರಖ್ಯಾತ ಉದ್ಯಮಿಗಳು, ಕಲಾವಿದರ ಸಮ್ಮುಖದಲ್ಲಿ ದುಬೈ ಗಿಸೈಸ್ ನ ಫಾರ್ಚ್ಯೂನ್ ಫ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಟ್ಲ ಸಂಭ್ರಮ 2019ರ ಮುಹೂರ್ತಪೂಜೆ ಸಂಭ್ರಮದಿಂದ ಸಂಪನ್ನಗೊಂಡಿತು. ಈ ಸದವಸರದಲ್ಲೇ ಮಹೂರ್ತಪೂಜೆಯ ಅಂಗವಾಗಿ, ದುಬೈ ಯಕ್ಷಗಾನ ಅಭ್ಯಾಸ ತರಗತಿಯ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ, “ಮಹಿಷಮರ್ದಿನಿ ಜಗಜ್ಜನನಿ” ಯ ಪ್ರಥಮಾಂಕದ ಪ್ರಸ್ತುತಿಯು ನೆರೆದ ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು. ಹಾಗೆಯೇ ಸಾಧನಾ ಸಂಭ್ರಮ ಮತ್ತು ಯಕ್ಷಾರಾಧನ- 2019ರ ಮುಹೂರ್ತ ಪೂಜೆಯ ಅಂಗವಾಗಿ ಎಲ್ಲಾ ಕಲಾವಿದರಿಂದ ಗೆಜ್ಜೆಸೇವೆ ಮತ್ತು ರಂಗಪ್ರವೇಶ ನಡೆದು ಉತ್ತಮ ರಂಗಪ್ರದರ್ಶನದ ಭರವಸೆ ಮೂಡಿಸಿತು.

ಮುಹೂರ್ತ ಪೂಜೆಯ ವೈದಿಕ ವಿಧಿ ವಿಧಾನಗಳು ಪುತ್ತಿಗೆ ವಾಸುದೇವ ಭಟ್ ರವರ ನಿರ್ದೇಶನದಲ್ಲಿ ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಲಕ್ಷೀಕಾಂತ ಭಟ್, ಭವಾನಿಶಂಕರ ಶರ್ಮರ ಅರ್ಚನೆ-ಪ್ರಾರ್ಥನೆಯೊಂದಿಗೆ ಸಾಕಾರಗೊಂಡಿತು. ರಾಜೇಶ್ ಕುತ್ತಾರು ನೇತೃತ್ವದಲ್ಲಿ ಶ್ರೀರಾಜರಾಜೇಶ್ವರಿ ಭಜನಾ ಮಂಡಳಿಮತ್ತು ದುಬೈ ಯ ಕೀರ್ತನಾ ಭಜಕರಿಂದ ನಡೆದ ಭಜನೆ, ಕಾರ್ಯಕ್ರಮಕ್ಕೆ ದಿವ್ಯತೆ ಒದಗಿತು.

ಪಟ್ಲ ಸಂಭ್ರಮ 2019ರ ಸಮಾಲೋಚನ ಸಭೆ

ಯಕ್ಷಧ್ರುವ ಪಟ್ಲ ಪೌಂಡೇಶನ್ ಯು.ಎ.ಇ. ಘಟಕದ ಘನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನ ಸಭೆಯು ಸಮಂಗಲೆಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.

ಘಟಕದ ಕಾರ್ಯದರ್ಶಿ ವಿಠಲ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ಭಾಗವತ ಶಿರೋಮಣಿ, ನೊಂದ ಕಲಾವಿದರ ಬದುಕು ರೂಪಣೆಯ ಆಶಾಕಿರಣ, ಸತೀಶ ಶೆಟ್ಟಿ ಪಟ್ಲರ ನೇತೃತ್ವದ ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಧ್ಯೇಯ ಧೋರಣೆಗಳು, ಕಲಾವಿದರಿಗೆ ಬದುಕು ಕಟ್ಟಿಕೊಡುವಲ್ಲಿ ಕೈಕೊಂಡ ಅನೇಕ ಕಾರ್ಯಕ್ರಮಗಳಾದ ಸಹಾಯಧನ, ಪ್ರಶಸ್ತಿ, ವೈದ್ಯಕೀಯ ನೆರವು, ವಿಮಾ ಸೌಲಭ್ಯ, ಕ್ರೀಡಾಕೂಟ ಇತ್ಯಾದಿಗಳ ಸಾದ್ಯಂತ ವಿವರಣೆಯ ಜೊತೆ, ಯು.ಎ.ಇ. ಘಟಕದಿಂದ ಈ ಸಕಾರ್ಯಕ್ಕೆ ನಾವಿತ್ತ ನೆರವು, ಸಹಕಾರಗಳನ್ನು ನೆನಪಿಸಿಕೊಟ್ಟರು.

ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗರುಗಳು ಹಾಗೂ ನಿರ್ದೇಶಕರಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರು ಅಕ್ಟೋಬರ್ 18 ರಂದು ದುಬೈ ಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಸಂಭ್ರಮದ ಉದ್ದೇಶದಿಂದ ಪ್ರದರ್ಶಿಸಲಿರುವ “ಮಹಿಷಮರ್ಧಿನಿ ಜಗಜ್ಜನನಿ ಯ ಕುರಿತಾದ ವಿವರಣೆ, ಭಾಗವಹಿಸಲಿರುವ ಅತಿಥಿ ಕಲಾವಿದರ ವಿವರವನ್ನು ಸಭೆಗೆ ನೀಡಿದರು. ಘಟಕದ ಕೋಶಾಧಿಕಾರಿ ಕೊಟ್ಟಿಂಜ ದಿನೇಶ ಶೆಟ್ಟರು ಕಾರ್ಯಕ್ರಮದ ಖರ್ಚುವೆಚ್ಚಗಳ ಪಕ್ಷಿನೋಟ ನೀಡಿದರು.ಈ ಅಂದಾಜುವೆಚ್ಚವನ್ನು ಸಭೆ ಅನುಮೋದಿಸಿ ಒಪ್ಪಿಗೆ ಸೂಚಿಸಿತು.

ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡಿ ಪಟ್ಲ ಸತೀಶ ಶೆಟ್ಟರು ನಡೆಸುವ ಯಕ್ಷಗಾನ ಕಲಾವಿದರಿಗಾಗಿ ನಡೆಸುವ ಸಮಾಜಮುಖಿ ಕಾರ್ಯಕ್ರಮಗಳ ಒಳ ನೋಟ, ನಾವೆಲ್ಲ ಆ ಸತ್ಕಾರ್ಯದಲ್ಲಿ ಕೈಜೋಡಿಸ ಬೇಕಾದ ಅಗತ್ಯ, ದುಬೈ ಯ ಉದಾರ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುವ ಭರವಸೆಯ ನುಡಿಗಳನ್ನಾಡುವ ಜೊತೆಗೆ 2016ರಲ್ಲಿ ಎಲ್ಲರಿಗಿಂತಲೂ ಹೆಚ್ಚು ಮೊತ್ತವನ್ನು ಒಗ್ಗೂಡಿಸಿದ ಕೀರ್ತಿ ನಮ್ಮ ಘಟಕದ್ದು, ಈ ಕಾರ್ಯಕ್ರಮದ ಮೂಲಕ ಆ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ, ವಿದೇಶದ ಪ್ರಥಮ ಘಟಕವೆಂಬ ನಮ್ಮ ಕೀರ್ತಿಗೆ ಗರಿಮೂಡುವಂತಾಗಬೇಕೆಂದು ಸಭೆಯ ಮುಂದೆ ನಿವೇದಿಸಿದರು.

ಸಮಾಲೋಚನ ಸಭೆಯಲ್ಲಿ ಉಪಸ್ಥಿತರಿದ್ದ ದುಬೈ ಯ ಆಡ್ಯಗಣ್ಯರಾದ ಪ್ರವೀಣ ಶೆಟ್ಟಿ ವಕ್ವಾಡಿ ಮಾಲ್ಹಕರು ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್, ಗುಣಶೀಲ ಶೆಟ್ಟಿ ಏಸ್ ಕ್ರೇನ್ಸ್, ರಘುರಾಮ ಶೆಟ್ಟಿ ಇಂಡಿಯಾ ಹೌಸ್ ಅಜಮಾನ್, ಅಬುಧಾಬಿ ಬಿಲ್ಲವ ಸಮುದಾಯದ ಮುಖಂಡರಾದ ಮನೋಹರ ತೋನ್ಸೆ, ದುಬೈ ಬಿಲ್ಲವ ಫ್ಯಾಮಿಲಿಯ ನೂತನ ಅಧ್ಯಕ್ಷರಾದ ಪ್ರಭಾಕರ ಸುವರ್ಣ, ದುಬೈ ಪದ್ಮಶಾಲಿ ಸಮುದಾಯದ ಅಧ್ಯಕ್ಷರಾದ ರವಿ ಶೆಟ್ಟಿಗಾರ್, ಐ.ಎಸ್.ಸಿ, ಅಬುಧಾಬಿಯ ಅಧ್ಯಕ್ಷರಾದ ಜಯರಾಮ ರೈ, ಉದ್ಯಮಿಗಳಾದ ದೇವೇಶ್ ಆಳ್ವ, ಲಕ್ಷ್ಮೀಕಾಂತ ಶೆಟ್ಟಿ, ಬಿರುವೆರ್ ಕುಡ್ಲ ಯು.ಎ.ಇ. ಘಟಕದ ಅಧ್ಯಕ್ಷರಾದ ಸತೀಶ ಉಳ್ಳಾಲ್, ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯ ಹಿಮ್ಮೇಳ ಕಲಾವಿದರು-ಮಾರ್ಗದರ್ಶರೂ ಆದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮೊದಲಾದವರು ಸಂಧರ್ಭ್ಯೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸುಸಂಧರ್ಭದಲ್ಲಿ ಸೆಪ್ಟೆಂಬರ್ 6 ರಂದು ಪುತ್ತಿಗೆ ವಾಸುದೇವ ಭಟ್ ರವರ ಸ್ವಗೃಹದ ವಿನಾಯಕ ಚತುರ್ಥಿ ಅಂಗವಾಗಿ ನಡೆಯಲಿರುವ “ಗದಾಯುದ್ಧ” ಮತ್ತು ಅಕ್ಟೋಬರ್ 11 ರಂದು ಪದ್ಮಶಾಲಿ ಸಮುದಾಯದ 10ನೇ ವರ್ಷ ಪದಾರ್ಪಣೆಯ ಸಲುವಾಗಿ ಹಮ್ಮಿಕೊಂಡ “ನಳ-ದಮಯಂತೀ” ತಾಳಮದ್ದಳೆ ಕಾರ್ಯಕ್ರಮಗಳಿಗೂ ಮುಹೂರ್ತ ಪೂಜೆ ನಡೆಸಲಾಯಿತು. ತಂಡದ ಹವ್ಯಾಸಿಭಾಗವತರಾದ ಕೃಷ್ಣಪ್ರಸಾದ ಸುರತ್ಕಲ್ ಹಾಗೂ ತಂಡದ ನಾಟ್ಯಗುರುಗಳೂ ಆದ ಶರತ್ ಕುಡ್ಲರವರು ಪ್ರಸಂಗದ ಹಾಡುಗಳನ್ನು ಹಾಡುವ ಮೂಲಕ ಶ್ರೀಕಾರ ಒದಗಿಸಿದರು. ರಾಜೇಶ್ ಕುತ್ತಾರು ನಿರ್ವಹಿಸಿದ ಈ ಕಾರ್ಯಕ್ರಮಮದ ಕೊನೆಯಲ್ಲಿ ಧನ್ಯವಾದ ಸಮರ್ಪಣಾ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.


Spread the love

Exit mobile version