ದುಬೈ ಯಲ್ಲಿ ‘ಸ್ವಪ್ನ ವಾಸವದತ್ತೆ’ ನಾಟಕದ ಮುದ್ರಿತ ಚಿತ್ರಸುರುಳಿ ಲೋಕಾರ್ಪಣೆ
ದುಬೈ: ಜನವರಿ ೧೯ರಂದು ದುಬೈಯಲ್ಲಿ ಯಶಸ್ವಿಯಾಗಿ ರಂಗವೇರಿದ “ಧ್ವನಿ” ಹವ್ಯಾಸಿ ಕಲಾವಿದರ ನಾಟಕ “ಸ್ವಪ್ನವಾಸವದತ್ತೆ ” ಯಾ ಮುದ್ರಿತ ಚಿತ್ರ ಸುರುಳಿಯನ್ನು ಮೇ ೧೧ -೨೦೧೮ ರ ಶುಕ್ರವಾರ ಸಂಜೆ ಬುರ್ಜ್ ಖಲೀಫಾ ರೆಸಿಡೆನ್ಸ್ ಟವರ್-೪ ನ ಥಿಯೇಟರ್ ನಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀ ದೇವ್ ಕುಮಾರ್ ಕಾಂಬ್ಳಿ ಹಾಗು ಶ್ರೀ ಸತೀಶ್ ಹಿಂಡೇರ ರವರು ಭಾಗವಹಿಸಿದ್ದರು . ಅತಿಥಿಗಳನ್ನು ಸ್ವಾಗತಿಸುತ್ತಾ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಹಾಗು ನಾಟಕದ ನಿರ್ದೇಶಕರಾದ ಪ್ರಕಾಶ್ ರಾವ್ ಪಯ್ಯಾರ್ ರವರು ಮಹಾ ಕವಿ ಭಾಸನ ನಾಟಕದ ಕನ್ನಡ ಭಾಷಾಂತರದ ಪ್ರದರ್ಶನಕ್ಕೆ ಸಭಾಂಗಣ ಕಿಕ್ಕಿರಿದು ತುಂಬಿದ್ದಕ್ಕೆ ಸಂತೋಷವಾಗಿದೆ ಎಂದರು. ಹಾಗೆಯೆ ಈ ನಾಟಕ ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರೆಲ್ಲರಿಗೂ ಸಿಗುವಂತಾಗಲಿ ಎಂದು YouTube ಮೂಲಕ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದರು.
ಶ್ರೀ ಕಾಂಬ್ಳಿಯವರು ಮಾತನಾಡುತ್ತ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಈ ನಾಡಿನಲ್ಲಿ ಧ್ವನಿ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಿದರು . ಇನ್ನೋರ್ವ ಅತಿಥಿ ಶ್ರೀ ಸತೀಶ್ ಹಿಂಡೇರ ರವರು ಮಾತನಾಡುತ್ತ ನಾನು ಇದುವರೆಗಿನ ಧ್ವನಿಯ ಎಲ್ಲ ನಾಟಕಗಳನ್ನು ನೋಡಿದ್ದು , ಧ್ವನಿ ಇನ್ನಷ್ಟು ಕನ್ನಡದ ಶ್ರೇಷ್ಠ ನಾಟಕಗಳನ್ನು ದುಬೈಯಲ್ಲಿ ರಂಗವೇರಿಸಲಿ ಎಂದು ಆಶಿಸಿದರು ಮತ್ತು ನಾಟಕದಲ್ಲಿ ಉತ್ತಮ ಅಭಿನಯ ನೀಡಿದಕ್ಕೆ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು . ಪ್ರಾಸ್ತಾವಿಕವಾಗಿ ಮಾತನಾಡುತ್ತ ಆರತಿ ಅಡಿಗರವರು ,’ಧ್ವನಿ’ಯ ನಾಟಕಗಳು ಹೇಗೆ ವಿಭಿನ್ನವಾಗಿವೆ? . ಸಮಕಾಲೀನ ಹಾಗು ವೈಚಾರಿಕ ರಂಗಭೂಮಿಯ ಛಾಪನ್ನು ದುಬೈಯಲ್ಲಿ ಹೇಗೆ ಮೂಡಿಸುತ್ತಿದೆ ಎಂಬುದನ್ನು ವಿವರಿಸಿದರು ,ಹಾಗೆಯೆ ಇನ್ನೂ ಸುಧಾರಿಸಿಕೊಳ್ಳಬೇಕಾದ ವಿಷಯಗಳ ಬಗ್ಗೆಯೂ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ನಾಟಕದ ಎಲ್ಲ ಕಲಾವಿದರು , ತಂತ್ರಜ್ಞರು ಪರದೆಯ ಹಿಂದೆ ದುಡಿದವರು ಹಾಗು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ನಾಗಭೂಷಣ್ ಕಷ್ಯಪರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಶೋಕ್ ಅಂಚನ್ ರವರು ವಂದನಾರ್ಪಣೆ ಗೈದರು , ಶ್ವೇತ ನಾಡಿಗ್ ಶರ್ಮ ನಿರೂಪಿಸಿದರು .
ನಾಟಕವನ್ನು ಕೆಳಗಿನ YouTube ಕೊಂಡಿಯ ಮೂಲಕ ವೀಕ್ಷಿಸಬಹುದು .
ವರದಿ – ಅಡಿಗ ಕೆ.ವಿ -ದುಬೈ