ದುರಸ್ತಿಗೆ ಕಾಯುತ್ತಿದೆ ಕಂಬ-ಪೊಳಲಿ-ರೈಲ್ವೆ ಸೇತುವೆ ರಸ್ತೆ
ಬಂಟ್ವಾಳ: ಎರಡು ವರ್ಷಗಳ ಹಿಂದೆ ಸುಮಾರು 5 ಕೋ.ರೂ.ವೆಚ್ಚದಲ್ಲಿ ಡಾಮರೀಕರಣಗೊಂಡು ಸುಸಜ್ಜಿತವಾಗಿ ನಿರ್ಮಾಣವಾಗಿದ್ದ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಮೊಡಂಕಾಪು ರೈಲ್ವೆಸೇತುವೆ ವರೆಗಿನ ಸುಮಾರು ೬೦೦ಮೀಟರ್ ಉದ್ದದಲ್ಲಿ ರಸ್ತೆಯನ್ನು ಅಗೆದು ಕುಡಿಯುವ ನೀರಿನ ಪೈಪ್ ಅಳವಡಿಸಿದ ಬಳಿಕ ಅದರ ಮೇಲೆ ಮಣ್ಣನ್ನು ಹಾಕಿ ಮುಚ್ಚಿ ಕೈತೊಳೆದು ಕೊಂಡಿದ್ದು,ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಳಚರಂಡಿ ಮತ್ತು ಸಮಗ್ರ ಕುಡಿಯುವ ನೀರಿನ ಯೋಜನಾ ಇಲಾಖೆಯು ಈ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇಲಾಖೆಯ ಈ ನಿರ್ಲಕ್ಷತನದಿಂದಾಗಿ ಮಳೆ ಬಂದರೆ ರಸ್ತೆ ಇಡಿ ಕೆಸರುಮಯವಾಗುವುದರ ಜೊತೆಗೆ ವಾಹನ ಸವಾರರಿಗೂ ತೊಂದರೆ ತಪ್ಪಿದ್ದಲ್ಲ.
ಜನದಟ್ಟಣೆಯ ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳಿವೆ. ಎರಡು ಪ್ರೈಮರಿ ಶಾಲೆಗಳು, ಮೂರು ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿವೆ. ಅಲ್ಲದೆ ಚರ್ಚ್, ಅಯ್ಯಪ್ಪ ಮಂದಿರ ಹಾಗೂ ವನದುರ್ಗಾ ದೇವಸ್ಥಾನವಿದೆ. ಹಾಗಾಗಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ವಾಹನ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ. ಇನ್ನು ಎರಡು ದಿನಗಳಲ್ಲಿ ಶಾಲೆ ಆರಂಭವಾಗಲಿದ್ದು, ಜೊತೆಗೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯೂ ಇದೆ. ಮಳೆ ಬಂದೇ ಬಿಟ್ಟರೆ ಮಕ್ಕಳು ಮತ್ತು ಇಲ್ಲಿ ಓಡಾಡುವ ಜನ ಸಾಮಾನ್ಯರು ತೊಂದರೆ ಅನುಭವಿಸುವುದು ಗ್ಯಾರಂಟಿ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮತ್ತು ಅಪೆಂಡಿಕ್ಸ್ ಇ ಬಜೆಟ್ನಿಂದ ಸುಮಾರು ೫ ಕೋಟಿ ರೂ ವೆಚ್ಚದಲ್ಲಿ ಬಿ.ಸಿ.ರೋಡಿನ ಕೈಕಂಬ – ಪೊಳಲಿ ರಸ್ತೆ ಕಾಮಗಾರಿಯನ್ನು ಸೆಪ್ಟಂಬರ್ ೨೦೧೬ರಂದು ಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡಿತ್ತು.. ಸುವ್ಯವಸ್ಥಿತವಾದ ರಸ್ತೆಯು ನಿರ್ಮಾಣವಾಗಿತ್ತು. ಆದರೆ ಈಗ ಪುರಸಭೆಯ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಈ ಭಾಗದಲ್ಲಿ ಅಳವಡಿಸುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದು ಪೈಪ್ಲೈನ್ ಹಾಕುವ ಕೆಲಸ ಮಾಡುತ್ತಿದ್ದಾರೆ.
ವರ್ಕ್ ಆರ್ಡರ್ ಗೊಂದಲ : ಲೋಕೊಪಯೋಗಿ ಇಲಾಖೆಯು ಎರಡು ವರ್ಷಗಳ ಹಿಂದೆ ರಸ್ತೆ ಡಾಮರೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಾಗಲೇ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟ ಇಲಾಖೆಗೆ ರಸ್ತೆ ಡಾಮರೀಕರಣಕ್ಕೆ ಮೊದಲೇ ಪೈಪ್ಲೈನ್ ಅಳವಡಿಸಲು ಸೂಚಿಸಿತ್ತು. ಆದರೆ ಯೋಜನೆಯ ಆದೇಶ ಪತ್ರ ಈ ಇಲಾಖೆಗೆ ತಲುಪದಿರುವುದರಿಂದ ಅವರು ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಅವರು ಕೆಲಸ ನಿರ್ವಹಿಸುವವರೆಗೆ ಕಾಯುವಷ್ಟು ಸಮಯ ಲೋಕೋಪಯೋಗಿ ಇಲಾಖೆಗೆ ಇರಲಿಲ್ಲ. ಅವರಿಗೆ ಅದಾಗಲೇ ಆದೇಶ ಪತ್ರವು ದೊರಕಿತ್ತು. ಮತ್ತು ಕೆಲಸ ಮುಗಿಸಬೇಕಾದ ದಿನಾಂಕವೂ ನಿಗದಿಯಾಗಿತ್ತು. ಹೀಗಾಗಿ ಎರಡು ಯೋಜನೆಗಳು ಬೇರೆ ಬೇರೆ ಸಮಯದಲ್ಲಿ ಮಾಡಬೇಕಾದ ಕಾರಣ ಈ ಪರಿಸ್ಥಿತಿ ಎದುರಾಗಿದೆ.
ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ತೊಂದರೆ : ಪ್ರತೀ ಸಲ ಪೈಪ್ಲೈನ್ ಕಾಮಗಾರಿ ಮಾಡುವಾಗಲೂ ರಸ್ತೆಗೆ ಕಂಟಕಪ್ರಾಯವಾಗುತ್ತದೆ. ಕುಡಿಯುವ ನೀರಿನ ಯೋಜನೆಯನ್ನು ಜಾರಿ ತರಬೇಕಾದುದು ಕೂಡಾ ಅಷ್ಟೇ ಅಗತ್ಯ. ಆದರೆ ಸ್ಥಳಾವಕಾಶ ಕಡಿಮೆ ಇರುವ ಕಾರಣ ಪೈಪ್ ಲೈನ್ ಅಳವಡಿಸಲು ಕೆಲವೊಂದು ಸಲ ರಸ್ತೆಯನ್ನೇ ಅಗೆಯಬೇಕಾದ ಅನಿವಾರ್ಯತೆ ಇರುತ್ತದೆ.ಆದರೆ ಅಗೆದ ರಸ್ತೆಯನ್ನು ಸರಿ ಮಾಡಲು ಈ ಇಲಾಖೆಗೆ ಯಾವುದೇ ಅನುದಾನ ದೊರಕುವುದಿಲ್ಲ. ಹೀಗಾಗಿ ರಸ್ತೆ ಅಗೆದು ಮಣ್ಣು ಹಾಕಿ ಕೈ ಚೆಲ್ಲಿ ಬಿಡುತ್ತಾರೆ. ಅದನ್ನು ಮತ್ತೆ ದುರಸ್ಥಿ ಮಾಡಬೇಕಾದ ಕೆಲಸ ಲೋಕೋಪಯೋಗಿ ಇಲಾಖೆಗೆ ತಲೆಗೆ ಬರುತ್ತದೆ. ಜನರು ರಸ್ತೆ ಹಾಳಾದಾಗ ಬೈದುಕೊಳ್ಳುವುದು ಕೂಡಾ ಲೋಕೋಪಯೋಗಿ ಇಲಾಖೆಗೆ. ಮರು ಡಾಮರೀಕರಣ ಅತ್ಯಗತ್ಯ : ಲೋಕೋಪಯೋಗಿ ಇಲಾಖೆ, ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನಾ ಇಲಾಖೆ ಹಾಗೂ ಪುರಸಭೆಯು ಹೊಂದಾಣಿಕೆ ಮಾಡಿಕೊಂಡು ಮಳೆಗೆ ಮೊದಲೇ ಅಗೆದ ರಸ್ತೆಗೆ ಮರು ಡಾಮರೀಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದ್ದು,ಇಲ್ಲದಿದ್ದಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಗೆ ಇಲಾಖೆಯೇ ಹೊಣೆ ಎಂದು ಸಾರ್ವಜನಿಕರು ಅಪಾದಿಸಿದ್ದಾರೆ.