ದೆಹಲಿ ಕರ್ನಾಟಕ ಸಂಘದಲ್ಲಿ ಮೋಹಸಿನ್ ಖಾನ್ ಅವರ ಸಿತಾರ್ ವಾದನ

Spread the love

ದೆಹಲಿ ಕರ್ನಾಟಕ ಸಂಘದಲ್ಲಿ ಮೋಹಸಿನ್ ಖಾನ್ ಅವರ ಸಿತಾರ್ ವಾದನ

ದೆಹಲಿ ಕರ್ನಾಟಕ ಸಂಘದಲ್ಲಿ ಅಗಸ್ಟ್ 19ರಂದು ಹಮ್ಮಿಕೊಂಡಿದ್ದ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂಗೀತ ನಮನ ಕಾರ್ಯಕ್ರಮದಲ್ಲಿ ಧಾರವಾಡದ ಯುವ ಕಲಾವಿದ ಶ್ರೀ ಮೋಹಸಿನ್ ಖಾನ್ ಅವರು ಸಿತಾರ್ ವಾದನ ಕಾರ್ಯಕ್ರಮ ನೀಡಿದರು. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಖಜಾಂಚಿ ಶ್ರೀ ಕೆ.ಎಸ್.ಜಿ. ಶೆಟ್ಟಿ, ಜಂಟಿ ಕಾರ್ಯದರ್ಶಿ ಶ್ರೀ ಟಿ.ಪಿ. ಬೆಳ್ಳಿಯಪ್ಪ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ಎಂ.ಎಸ್. ಶಶಿಕುಮಾರ್, ಶ್ರೀ ರಾಧಾಕೃಷ್ಣ, ಶ್ರೀಮತಿ ಪೂಜಾ ಪಿ. ರಾವ್, ಶ್ರೀ ವಿ.ವಿ. ಬಿರಾದಾರ, ಶ್ರೀ ಶಶಿಕಾಂತ್ ಪಾಟೀಲ್, ಶ್ರೀ ತ್ಯಾಗೇಶ್ ಮೂರ್ತಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಡಾ. ಪುರುಷೋತ್ತಮ ಬಿಳಿಮಲೆ, ಡಾ. ವೆಂಕಟಾಚಲ ಹೆಗಡೆ, ಮಾಜಿ ಉಪಾಧ್ಯಕ್ಷರಾದ ಶ್ರೀ ಎನ್.ಎ. ಮಾಧವ, ಕೊಡವ ಕೂರ್ಗ್ ಸಮಾಜದ ಅಧ್ಯಕ್ಷರಾದ ಶ್ರೀ ಮಾಚಿಮಂಡ ಅಪ್ಪಯ್ಯ ಕಾರಿಯಪ್ಪ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಶ್ರೀ ಶಿವಾನಂದ ಸಿರ್ಸಿಕರ್, ಶ್ರೀ ಬಿ.ವಿ. ಬಲ್ಲಾಳ್ ಮತ್ತು ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶ್ರೀ ಮೋಹಸಿನ್ ಖಾನ್ ನುಡಿಸಿದ ‘ಶಿವರಂಜಿನಿ’ ರಾಗ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಖಾನ್‍ರವರು ‘ಯಮನ್ ಕಲ್ಯಾಣ ರಾಗ’ದಲ್ಲಿ ನುಡಿಸಿದ ಒಂದು ಪ್ರಸ್ತುತಿ ಸಂಗೀತ ಪ್ರೇಮಿಗಳನ್ನು ಭಾವಪರವಶರನ್ನಾಗಿಸಿತು. ಭೈರವಿ ರಾಗದೊಂದಿಗೆ ಮುಕ್ತಾಯಗೊಂಡ ಈ ಕಾರ್ಯಕ್ರಮ ದೆಹಲಿ ಕನ್ನಡಿಗರ ಮನಸೂರೆಗೊಂಡಿದ್ದಂತೂ ನಿಜ. ಇವರಿಗೆ ತಬಲಾ ಸಾಥ್ ನೀಡಿದವರು ಧಾರವಾಡದ ಆಕಾಶವಾಣಿ ಕಲಾವಿದರಾದ ಶ್ರೀ ಪ್ರಶಾಂತ್ ಹಾರುಗೇರಿಯವರು. ಪ್ರಾರಂಭದಲ್ಲಿ ಶ್ರೀಮತಿ ಶ್ರುತಿ ಖಾನ್‍ರವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಇವರು ಬೇಂದ್ರೆಯವರ ‘ಕೊಡುವುದೇನು ಕೊಂಬುದೇನು’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಮೋಹಸಿನ್ ಖಾನ್‍ರವರು ಮೂಲತಃ ಬೀನ್‍ಕಾರ್ ಘರಾನಾ, ಇಂದೋರ್ ಇದರ 7ನೇ ತಲೆಮಾರಿನವರಾಗಿದ್ದಾರೆ. ಇವರ ಪೂರ್ವಜರು ಇಂದೋರ್‍ನ ರಾಜಮನೆತನಗಳಲ್ಲಿ ಆಸ್ಥಾನ ವಿದ್ವಾಂಸರಾಗಿ ರಾಜ ಮಹಾರಾಜರುಗಳಿಂದ ಮೆಚ್ಚುಗೆ ಪಡೆದವರು. ಮೋಹಸಿನ್ ಖಾನ್ ಅವರ ಪ್ರಥಮ ಗುರು ಇವರ ತಾತಾ ದಿ. ಅಬ್ದುಲ್ ಕರೀಂ ಖಾನ್. ನಂತರ ತಮ್ಮ ತಂದೆ ಉಸ್ತಾದ್ ಹಮೀದ್ ಖಾನ್ ಅವರ ಬಳಿ ತಮ್ಮ ಸಿತಾರ್ ತರಬೇತಿಯನ್ನು ಮುಂದುವರಿಸಿದರು. ಇವರು ತಮ್ಮ 21ನೇಯ ವಯಸ್ಸಿನಲ್ಲಿಯೇ ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಸಿತಾರ್ ಕಲಾವಿದರಾದರು. ಭಾರತದ ಬಹುತೇಕ ರಾಜ್ಯಗಳಲ್ಲಿ ಮಾತ್ರವಲ್ಲದೆ ಜರ್ಮನಿ, ಇಟೆಲಿ, ಜಪಾನ್, ಸೌತ್ ಕೊರಿಯಾ, ಫ್ರಾನ್ಸ್, ಕ್ರೊಯೇಶಿಯಾ, ನೆದರ್‍ಲ್ಯಾಂಡ್, ನೇಪಾಲ್ ಹಾಗೂ ರಷ್ಯಾದಲ್ಲೂ ಕೂಡ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2012ರಲ್ಲಿ ಬಿ. ಮ್ಯೂಸಿಕ್‍ನಲ್ಲಿ ಗೋಲ್ಡ್ ಮೆಡಲ್ ಪಡೆದ ಇವರು 2014ರಲ್ಲಿ ಕರ್ನಾಟಕ ಯುನಿವರ್ಸಿಟಿ ಧಾರವಾಡದಿಂದ ‘ಮಾಸ್ಟರ್ಸ್ ಇನ್ ಮ್ಯೂಸಿಕ್’ ಪಡೆದಿದ್ದಾರೆ. ಪ್ರಸ್ತುತ ಧಾರವಾಡದ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


Spread the love