ದೆಹಲಿ ಕರ್ನಾಟಕ ಸಂಘದಿಂದ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ

Spread the love

ದೆಹಲಿ ಕರ್ನಾಟಕ ಸಂಘದಿಂದ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ

ದೆಹಲಿ: ದೆಹಲಿ ಕರ್ನಾಟಕ ಸಂಘ ಈ ವರ್ಷದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಭಾಷಾ ಬಾಂಧವ್ಯ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮವನ್ನು  ಡಿಸೆಂಬರ್ 3ರಂದು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮಕ್ಕೆ ಮಂಗಳೂರಿನ ಎಸ್.ಡಿ.ಎಂ.ಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ದೆಹಲಿಯಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದ ರಂಗಕರ್ಮಿ, ಖ್ಯಾತ ಚಿತ್ರಕಲಾವಿದ   ಚೆನ್ನು ಎಸ್. ಮಠದ, ಖ್ಯಾತ ಹೋಟೆಲು ಉದ್ಯಮಿ ಮತ್ತು ಸಮಾಜ ಸೇವಕರಾದ  ಶೇಖರ್ ಎನ್. ಬಂಗೇರ, ಸೌಜನ್ಯ ಪ್ರಿಂಟಿಂಗ್ ಪ್ರೆಸ್‍ನ ಮಾಲೀಕರಾದ   ವೈಜನಾಥ್ ಎನ್. ಹೆಗಣೆ ಅವರುಗಳಿಗೆ ವಿಶಿಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಮುಖ್ಯ ಅತಿಥಿಗಳಾದ   ರಾಜೇಂದ್ರ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ   ವಸಂತ ಶೆಟ್ಟಿ ಬೆಳ್ಳಾರೆ ಅವರು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದೀ ಚಿಂತಕ, ಧೀಮಂತ ನಾಯಕ ದಿವಂಗತ ಜೆ.ಹೆಚ್.ಪಟೇಲ್ ಅವರು ಸಂಸತ್ತಿನಲ್ಲಿ ದಿನಾಂಕ 4.12.1967 ರಂದು ಮಾರ್ದನಿಸಿದ ಕನ್ನಡ ಕಹಳೆ 03.12.2017ಕ್ಕೆ ಐವತ್ತು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ “ಕನ್ನಡದ ಕಹಳೆಗೆ 50ರ ಸಂಭ್ರಮ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದು ಕನ್ನಡಿಗರಿಗೆ ಅತ್ಯಂತ ಅಭಿಮಾನದ ಸಂಗತಿ ಮಾತ್ರವಲ್ಲ  ಸಂಭ್ರಮಾಚರಣೆಯ ಸಂಗತಿಕೂಡ ಹೌದು. ಕಾರಣ ಹಿಂದಿಯನ್ನು ಬಿಟ್ಟರೆ ಉಳಿದೆಲ್ಲ ಭಾರತೀಯ ಭಾಷೆಗಳಲ್ಲಿಯೇ ಮೊದಲ ಬಾರಿಗೆ ಕನ್ನಡದ ಧ್ವನಿ ಕೇಳಿಸಿದ್ದು ಪಟೇಲರಿಂದ. ಸಂಸತ್ತಿನಲ್ಲಿ ಪಟೇಲ್ ಕುರಿತು  ಚಂದ್ರಶೇಖರ್‍ಎನ್.ಪಿ. ಅವರು ಮಾತನಾಡಿದರು.

ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ   ಸಿ.ಎಂ.ನಾಗರಾಜ ಅವರು ವಂದಿಸಿದರು.


Spread the love