Home Mangalorean News Kannada News ದೇವತಾ ಸೇವೆಯ ಮೂಲಕ ಸಮಾಜ – ದೇಶದ ಸೇವೆ – ಪೇಜಾವರ ಸ್ವಾಮೀಜಿ

ದೇವತಾ ಸೇವೆಯ ಮೂಲಕ ಸಮಾಜ – ದೇಶದ ಸೇವೆ – ಪೇಜಾವರ ಸ್ವಾಮೀಜಿ

Spread the love

ದೇವತಾ ಸೇವೆಯ ಮೂಲಕ ಸಮಾಜ – ದೇಶದ ಸೇವೆ – ಪೇಜಾವರ ಸ್ವಾಮೀಜಿ

ಉಡುಪಿ: ಊರವರೆಲ್ಲರೂ ಸೇರಿ ನಡೆಸುವ ದೇವತಾ ಸೇವೆಯಿಂದ ಊರು ಸುಭಿಕ್ಷವಾಗುತ್ತದೆ, ಈ ಮೂಲಕ ದೇಶ ಸುಭಿಕ್ಷವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಅವರು ಭಾನುವಾರ ಇಲ್ಲಿನ ಶ್ರೀ ಕ್ಷೇತ್ರ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವರ ನೂತನ ದೇವಳದ ಸಮರ್ಪಣೆ, ಪುನಃಪ್ರತಿಷ್ಠೆ, ಸಹಸ್ರಕಲಶ ಬ್ರಹ್ಮಕುಂಭಾಭಿಷೇಕಕ್ಕೆ ಪೂರ್ವಬಾವಿಯಾಗಿ ನಡೆದ ಹೊರೆಕಾಣಿಕೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಊರವರು ನಡೆಸಿದ ಈ ಭವ್ಯ ಹೊರೆಕಾಣಿಕೆ ಮೆರವಣಿಗೆಯನ್ನು ನೋಡಿದಾಗ ಅವರ ಭಕ್ತಿಶೃದ್ಧೆಗಳು ಕಾಣುತ್ತಿವೆ. ಅನ್ನದಾನಕ್ಕೆ ಪೂರಕವಾಗಿ ನಡೆದ ಈ ಹೊರೆಕಾಣಿಕೆಯನ್ನು ತಂದೊಪ್ಪಿಸಿದ ಪ್ರತಿಯೊಬ್ಬರ ಮನೆಯಲ್ಲಿ ಅನ್ನಕ್ಕೆ ಕೊರತೆಯಾಗುವುದಿಲ್ಲ ಎಂದ ಶ್ರೀಗಳು ಎಲ್ಲರಿಗೂ ಕ್ಷೇತ್ರಾಧಿಪತಿ ದೇವತೆಗಳು, ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ಮತ್ತು ವಿಶೇಷವಾಗಿ ಆಯೋಧ್ಯೆ ಬಾಲರಾಮನ ಅನುಗ್ರಹವನ್ನು ಪ್ರಾರ್ಥಿಸುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಫೆರ್ಣಂಕಿಲ ಹರಿದಾಸ ಭಟ್ ವಹಿಸಿದ್ದರು, ಸಮಿತಿಯ ಪ್ರದಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಪೇಜಾವರ ಮಠದ ದಿವಾಣರಾದ ಎಂ.ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ದೇವಳದ ವಿಶ್ವಸ್ಥ ನ್ಯಾಯವಾದಿ ಸತೀಶ್ ಪೂಜಾರಿ, ಸಮಿತಿ ಸಂಘಟನಾ ಕಾರ್ಯದರ್ಶಿ ಸದಾನಂದ ಪ್ರಭು, ಉಪಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಉಮೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಭೆಗೆ ಮೊದಲು ಓಂತಿಬೆಟ್ಟುವಿನಿಂದ ದೇವಳದವರೆಗೆ ಭವ್ಯ ಹೊರೆಕಾಣಿಕೆ ಮರ‍ಮಣಿಗೆ ನಡೆಯಿತು. ಈ ಸಂದರ್ಭದಲ್ಲಿ ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ, ಮಂಡಲೋತ್ಸವ ಮುಗಿಸಿ ಬಂದ ಪೇಜಾವರ ಶ್ರೀಗಳನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಜೊತೆ, ಸಾಮಾಜಿಕ ಗಣ್ಯರಾದ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಶಿಲ್ಪಾ ಜಿ. ಸುವರ್ಣ, ಉಪೇಂದ್ರ ನಾಯಕ್ ಮುಂತಾದವರು ಹೊರೆಕಾಣಿಕೆ ಮೆರವಣಿಗೆ ನೇತೃತ್ವ ವಹಿಸಿದ್ದರು.


Spread the love

Exit mobile version