Home Mangalorean News Kannada News ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ :ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ದಾಸೋಹ ಏರ್ಪಡಿಸುವ ಸಂದರ್ಭದಲ್ಲಿ ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸುವ ಕುರಿತು ಎಲ್ಲಾ ದೇವಾಲಯಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಿಗೆ ಕಾರ್ಯಾಗಾರ ಏರ್ಪಡಿಸಿ , ಆಹಾರ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚೆಗೆ ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ಯಾಡಿ ಗ್ರಾಮದ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಾಧಿಗಳಿಗೆ ನೀಡಲಾದ ಪ್ರಸಾದದಲ್ಲಿ ವಿಷ ಮಿಶ್ರಣ ದಿಂದ ಕೆಲವರು ಮೃತಪಟ್ಟು, ಹಲವು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದ್ದರಿಂದ ದೇವಾಲಯಗಳಲ್ಲಿ ದಾಸೋಹ ಮತ್ತು ಪ್ರಸಾದ ತಯಾರಿಸುವಾಗ ಅಗತ್ಯ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಪ್ರಸಾದ ತಯಾರಿಕೆ ಕೋಣೆ ಮತ್ತು ದಾಸೋಹ ತಯಾರಿಸುವ ಅಡುಗೆ ಕೋಣೆಗೆ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸುವಂತೆ ಮತ್ತು ಈ ಕೋಣೆಗಳಿಗೆ ಯಾರೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ನಿಗಾ ವಹಿಸುವಂತೆ, ತಯಾರಿಸಿರುವ ನೈವೇದ್ಯ, ಪ್ರಸಾದ, ಅಡುಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಜಿಲ್ಲಾಧಿಕಾರಿ, ಸುರಕ್ಷಿತ ಆಹಾರ ತಯಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ದೇವಾಲಯಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಿಗೆ ಪ್ರತ್ಯೇಕ ಕಾರ್ಯಾಗಾರ ಏರ್ಪಡಿಸುವಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಿಂದ ಗೋವಾಗೆ ತೆರಳುವ ಮೀನು ಸಾಗಾಟ ವಾಹನಗಳ ಮಾಲೀಕರು ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಕೆ ಬಳಸುವ ಪದಾರ್ಥಗಳ ಗುಣಮಟ್ಟದ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ಹಾಗೂ ಆಹಾರ ಪದಾರ್ಥಗಳು ಸರಬರಾಜು ಆಗುವ ಗೋಡೌನ್ಗಳಿಗೆ ಸಹ ಭೇಟಿ ನೀಡಿ ಕೈಗೊಂಡಿರುವ ಸುರಕ್ಷತಾ ಕ್ರಮಗಳು ಮತ್ತು ಅಲ್ಲಿರುವ ಆಹಾರ ಪದಾರ್ಥಗಳ ಗುಣಮಟ್ಟ ಕುರಿತು ಪರಿಶೀಲಿಸುವಂತೆ ಹಾಗೂ ಈ ಕುರಿತು ತಮಗೆ ವರದಿಯನ್ನು ನೀಡುವಂತೆ ಸೂಚಿಸಿದರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಾಳಿ ನಡೆಸುವ ಸಂದರ್ಭದಲ್ಲಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಹಾಗೂ ತಂಡದ ಸದಸ್ಯರಿಗೆ ಪ್ಲಾಸ್ಟಿಕ್ನ ವಿಧಗಳ ಬಗ್ಗೆ ತರಬೇತಿ ನೀಡಿ ಹಾಗೂ ಜಿಲ್ಲೆಯ ಎಲ್ಲಾ ಬೀಚ್ಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಎಂಬ ಸೂಚನಾ ಫಲಕ ಮತ್ತು ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಕುರಿತ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ನವೆಂಬರ್ ಅಂತ್ಯದವರೆಗೆ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳ ಕೋಟ್ಪಾ ನಿಯಂತ್ರಣಾ ದಳದಿಂದ ಒಟ್ಟು 1938 ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ 2,61,990 ದಂಡ ವಸೂಲಿ ಮಾಡಲಾಗಿದೆ, 46 ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version