Home Mangalorean News Kannada News ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ಮರುಳಾಗಬೇಡಿ: ಸಿಎಂ ಸಿದ್ದರಾಮಯ್ಯ

ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ಮರುಳಾಗಬೇಡಿ: ಸಿಎಂ ಸಿದ್ದರಾಮಯ್ಯ

Spread the love

ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ಮರುಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನರ ಧ್ವನಿ, ಸಂವಿಧಾನ ರಕ್ಷಣೆಯ ಧ್ವನಿ, ರಾಜ್ಯದ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿ, ಇವರು ನಮ್ಮ-ನಿಮ್ಮಲ್ಲರ ಧ್ವನಿಯಾಗಿ ಪಾರ್ಲಿಮೆಂಟಿಗೆ ಹೋಗ್ತಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿ ಕಳಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.‌ ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ ಸಾಮಾನ್ಯ ಒಕ್ಕಲಿಗ ಕುಟುಂಬದಿಂದ ಬಂದು ಶ್ರಮದಿಂದ ಮೇಲೆ ಬಂದ ಕಾರ್ಯಕರ್ತ. ಇವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರವನ್ನು ಬಿಜೆಪಿಗರು ವ್ಯಾಪಕವಾಗಿ ಮಾಡುತ್ತಿದ್ದಾರೆ. ಆದರೆ, ಎಂ.ಲಕ್ಷ್ಮಣ್ ಅವರು ಅಪ್ಪಟ ಒಕ್ಕಲಿಗರು. ಬಿಜೆಪಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ. ಆ ಕಾರಣಕ್ಕೇ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಮತ್ತು ಅಪಪ್ರಚಾರವನ್ನು ನಂಬಬೇಡಿ ಎಂದರು.

ಮೋದಿಯವರು ಈ ಹತ್ತು ವರ್ಷದಲ್ಲಿ ಸುಳ್ಳು ಹೇಳಿ ಭಾರತೀಯರನ್ನು ಮರಳು ಮಾಡಿದ್ದು ಬಿಟ್ಟರೆ, ಭಾರತೀಯರ ಬದುಕು ಸುಧಾರಿಸುವ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲಿಲ್ಲ ಏಕೆ? ಹತ್ತು ವರ್ಷದಲ್ಲಿ ಜನರ, ರಾಜ್ಯದ ಸಮಸ್ಯೆಗಳಲ್ಲಿ ಒಂದೇ ಒಂದನ್ನಾದರೂ ಬಗೆಹರಿಸಿದರಾ ? ಯಾವುದನ್ನೂ ಮಾಡದೆ ಹತ್ತು ವರ್ಷ ಮಾತಾಡ್ಕೊಂಡು ಕಾಲ ಕಳೆದರಲ್ಲಾ. ಇದು ಸರಿಯಾ ಎಂದು ಪ್ರಶ್ನಿಸಿದರು.

ವಿದೇಶದಿಂದ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಹಾಕ್ತೀನಿ ಅಂದರು. ಅದನ್ನು ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದರು. ಹೊಸ ಉದ್ಯೋಗ ಬರುವುದಿರಲಿ, ಹಳೆ ಉದ್ಯೋಗಗಳೇ ನಷ್ಟ ಆದವು. ಇದೇ ಏನು ಅಚ್ಛೆ ದಿನ್ ? ಎಂದು ವ್ಯಂಗ್ಯವಾಡಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಅಕ್ಕಿ, ಬೇಳೆ , ಎಣ್ಣೆ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಮೋದಿ ಪ್ರಕಾರ ಇದೇ ಅಚ್ಛೆ ದಿನ ಇರಬಹುದು. ಆದರೆ ನಿಜವಾದ ಅಚ್ಛೆ ದಿನ್ ನಿಮಗೆ ಯಾರಿಗಾದರೂ, ಒಬ್ಬರಿಗಾದರೂ ಬಂದಿದೆಯಾ ಎಂದು ಪ್ರಶ್ನಿಸಿದರು.

ನಮ್ಮ ನಾಡಿಗೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ, ಬರಗಾಲ ಬಂದಾಗಲೂ ಮೋದಿ ಬರಲಿಲ್ಲ, ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಮೋದಿ ಬರಲಿಲ್ಲ. ಚುನಾವಣೆ ಬಂತು ನೋಡಿ-ಮೋದಿ ರಾಜ್ಯಕ್ಕೆ ಬಂದ್ರುʼ ಎಂದು ಹೇಳಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ್ದೇ ಬಿಜೆಪಿ. ಹಾಗಂತ ಇದೇ ಕುಮಾರಸ್ವಾಮಿ ಬಯ್ಯುತ್ತಿದ್ದರು. ಈಗ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಆದ್ದರಿಂದ ಇವರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದವನ್ನು ಕಿತ್ತಾಕೋದು ಉತ್ತಮ ಎಂದೆ. ಇಷ್ಟು ಹೇಳಿದ್ದಕ್ಕೇ ಸಿದ್ದರಾಮಯ್ಯರಿಗೆ ಗರ್ವ ಎನ್ನುತ್ತಿದ್ದಾರೆ ದೇವೇಗೌಡರು. ದೇವೇಗೌಡರ ಕುರಿತು ನಮಗಿರುವುದು ರಾಜಕೀಯ ವಿರೋಧ ಮಾತ್ರ. ನಿಮ್ಮ ರಾಜಕೀಯ ನಿಲುವುಗಳಿಗೆ ಮಾಡುವ ವಿರೋಧ. ಯಾವುದೇ ಕಾರಣಕ್ಕೂ ನಮ್ಮದು ದೇವೇಗೌಡರ ಬಗ್ಗೆ ವೈಯುಕ್ತಿಕ ವಿರೋಧ ಇಲ್ಲವೇ ಇಲ್ಲ ಎಂದರು.

ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರನ್ನೂ ಬಳಸಿ ಬಿಸಾಲಿದ ಜೆಡಿಎಸ್, ನನ್ನನ್ನೂ ಪಕ್ಷದಿಂದ ಹೊರಗೆ ಹಾಕಿದರು. ಇದೇ ರೀತಿ ಹಲವು ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಇವರ ಈ ರಾಜಕೀಯ ವರ್ತನೆಗೆ ಮಾತ್ರ ನಮ್ಮ ವಿರೋಧ. ಆದ್ದರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಕಣ್ಣೀರಿಗೆ ಮರುಳಾಗದೆ, ಅವರ ಮಾತುಗಳನ್ನು, ಅವರ ವರ್ತನೆಯನ್ನು, ಪದೇ ಪದೇ ಬದಲಾಗುವ ಅವರ ನಿಲುವುಗಳನ್ನು ಪ್ರಶ್ನಿಸಿ ಪ್ರಭುದ್ಧವಾದ ಮತ್ತು ಖಚಿತವಾದ ರಾಜಕೀಯ ನಿರ್ಧಾರ ತೆಗೆದುಕೊಳ್ಳಿ ಎಂದರು.

ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿ, ನಾನು ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣ ಮುಂದಿವೆ. ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಿ ಎಂದು ಪ್ರಶ್ನಿಸಿದರು.

ಬರೀ ಶ್ರೀಮಂತರು ಹೊಟ್ಟೆ ತುಂಬಿಸಿಕೊಂಡು ಮಲಗೋದಲ್ಲ. ಬಡವರೂ ರಾತ್ರಿ ಹೊಟ್ಟೆ ತುಂಬ ಊಟ ಮಾಡಿ ಮಲಗಬೇಕು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆವು. ನಮ್ಮ ಭಾಗ್ಯಗಳೆಲ್ಲಾ ಬಡವರ ಬದುಕಿಗೆ ಆಸರೆಯಾದವು ಎಂದರು.


Spread the love

Exit mobile version