ದೇಶಕ್ಕೆ ಅಪಾಯ ಬಂದಾಗ ಶತ್ರುಗಳ ರಕ್ತ ಸುರಿಸಲು ಭಾರತೀಯ ಸೈನಿಕರು ಹೆದರಲ್ಲ – ಶ್ರೀಕಾಂತ್ ಶೆಟ್ಟಿ
ಮೂಡಬಿದ್ರಿ; ಒಂದು ಹನಿ ರಕ್ತ ನೋಡಿ ಅಯ್ಯೊ ಪಾಪ ಎನ್ನುವ ನಮ್ಮ ಭಾರತದ ಸಹೃದಯಿ ಸೈನಿಕರು ದೇಶಕ್ಕೆ ಅಪಾಯ ಬಂದಾಗ ಮಾತ್ರ ಶತ್ರುಗಳ ರಕ್ತ ಸುರಿಸಲು ಹೆದರುವುದಿಲ್ಲ ಎಂದು ಮುಕ್ತ ವಾಹಿನಿಯ ಆಡಳಿತ ನಿರ್ದೇಶಕ ಶ್ರೀಕಾಂತ್ ಶೆಟ್ಟಿ ಹೇಳಿದರು.
ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ ಶೆಟ್ಟಿ ಮಾತನಾಡಿ ದೇಶ ಸೇವೆ ಮಾಡಲು ದೇಶದ ಗಡಿಗೆ ಹೋಗಿ ಕಾರ್ಯ ನಿರ್ವಹಿಸಬೇಕೆಂದಿಲ್ಲ. ನಿಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಆ ಮೂಲಕ ದೇಶಕ್ಕೆ ಕೊಡುಗೆ ನೀಡಬಹುದು ಎಂದರು. ನಮ್ಮ ದೇಶವನ್ನು ಕಾಯುವ ಸೈನಿಕರ ಬಗ್ಗೆ ಸದಾ ಗೌರವವನ್ನು ಹೊಂದಿರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ ಎಮ್.ಡಿ. ಮಾತನಾಡಿ ಇಂದು ನಮ್ಮ ಯುವಜನತೆಯ ಮನಸ್ಸನ್ನು ಹಾಳು ಮಾಡುವ ಸತತ ಹುನ್ನಾರ ನಡೆಯುತ್ತಿದೆ. ಆ ಯತ್ನವನ್ನು ಮಾದಕವಸ್ತುಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ನೆರವೇರಿಸಲಾಗುತ್ತಿದೆ. ಆದ್ದರಿಂದ ಯುವಜನತೆ ಎಚ್ಚೆತ್ತುಕೊಂಡು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಕಾರ್ಯಪ್ರವೃರ್ತರಾಗಬೇಕೇ ಹೊರತು, ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥ ಪ್ರೋ.ವೇಣುಗೋಪಾಲ ಶೆಟ್ಟಿ, ರಾಷ್ಟೀಯ ಸೇವಾ ಯೋಜನೆಯ ಅಧಿಕಾರಿಗಳಾದ ಅಂಬರೀಶ, ದಾಮೋದರ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಸುಪ್ರಿಯಾ ಸ್ವಾಗತಿಸಿ,ಪ್ರಿಯಾಂಕ ವಂದಿಸಿದರು.