ದೇಶದಲ್ಲಿ ಘಟಬಂಧನ್, ರಾಜ್ಯದಲ್ಲಿ ಮೈತ್ರಿ ಸರ್ಕಾರ ಫಲಿತಾಂಶದ ಬಳಿಕ ನುಚ್ಚುನೂರಾಗಲಿದೆ – ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ‘ದೇಶದಲ್ಲಿ ಘಟಬಂಧನ್ ಹಾಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನುಚ್ಚುನೂರಾಗಲಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಿಜೆಪಿ ಬಹುಮತ ಪಡೆಯಲಿದೆ ಎಂಬ ವಿಚಾರ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗವಾದ ಬಳಿಕ ದೇಶದಲ್ಲಿ ಸಂಚಲನ ಉಂಟಾಗಿದೆ. ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಮೈತ್ರಿಕೂಟದಲ್ಲಿ ಚುನಾವಣೆ ಸಂದರ್ಭ ಬಿರುಕು ಮೂಡಿತ್ತು. ಉದ್ದೇಶ ಈಡೇರಿಲ್ಲ ಎಂಬುದು ಅರಿವಾಗಿದೆ. ಸರ್ಕಾರ ತಾನಾಗೇ ಬಿದ್ದುಹೋಗಲಿದೆ. ಮೈತ್ರಿಕೂಟ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ಅಭಿಪ್ರಾಯ ಸೂಕ್ತವಾಗಿದೆ’ ಎಂದರು.
‘ಮಮತಾ ಬ್ಯಾನರ್ಜಿ ಅವರಿಗೆ ಮತದಾರರ ಮೇಲೆ ಹಾಗೂ ಮತಯಂತ್ರಗಳ ಮೇಲೆ ನಂಬಿಕೆ ಇಲ್ಲ. ಸೋಲಿನ ಭೀತಿಯಿಂದ ಮತಯಂತ್ರದ ಮೇಲೆ ಅನುಮಾನಪಡುತ್ತಿದ್ದಾರೆ’ ಎಂದು ಟೀಕಿಸಿದರು.