ದೇಶದ ಅಭಿವೃದ್ದಿಗೆ ದಲಿತರೊಳಗೊಂದಾಗಿ- ಸಚಿವ ಪ್ರಮೋದ್ ಮಧ್ವರಾಜ್

Spread the love

ದೇಶದ ಅಭಿವೃದ್ದಿಗೆ ದಲಿತರೊಳಗೊಂದಾಗಿ- ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಪ್ರಸ್ತುತ ಭಾರತ ದೇಶವು ಅಭಿವೃದ್ದಿಯ ದೃಷ್ಠಿಯಿಂದ ಇಡೀ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದು, ದೇಶ ವಿಶ್ವದ ನಂ1 ಸ್ಥಾನ ಅಲಕಂರಿಸಬೇಕಾದರೆ ಅಭಿವೃದ್ದಿ ಕಾರ್ಯಗಳಲ್ಲಿ ದಲಿತವರ್ಗ ಸೇರಿದಂತೆ ಎಲ್ಲಾ ವರ್ಗದವರೂ ಜೊತೆಯಲ್ಲಿ ಸಾಗಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ ಉಡುಪಿಯ ಪೂರ್ಣ ಪ್ರಜ್ಞಾ ಆಡಿಟೋರಿಯಂ ಬಳಿಯ ವಿಭುದೇಶ ತೀರ್ಥ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಲಿತ ವಚನಕಾರರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಇತಿಹಾಸ ಅರಿಯದೇ ಭವಿಷ್ಯದ ಅಭಿವೃದ್ಧಿ ಸಾಧ್ಯವಿಲ್ಲ, ದಲಿತ ವಚನಕಾರರು ನೀಡಿದ ಸಂದೇಶಗಳು ಸಮಾಜಕ್ಕೆ ಮಾದರಿಯಾಗಿವೆ, ವಚನಕಾರರ ನೇರ, ನಿಷ್ಠುರ ವಚನಗಳು ಸಮಾಜದ ಪರಿವರ್ತನೆಗೆ ಕಾರಣವಾಗಿವೆ. ದೇಶದ ಒಟ್ಟು ಜನಸಂಖ್ಯೆಯ ಶೇ.25 ದಲಿತರಿದ್ದು, ಬಡತನ ರೇಖೆಗಿಂತ ಕೆಳಗಿರುವ ದೇಶದ 25 ಕೋಟಿ ಜನಸಂಖ್ಯೆಯಲ್ಲಿ ಶೇ.50 ಕ್ಕೂ ದಲಿತರಿದ್ದಾರೆ, ದಲಿತರ ನೈಜ ಪರಿಸ್ಥಿತಿ ಅರಿಯಬೇಕಾದರೆ ದಲಿತ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ, ದೇಶದ ಅಭಿವೃದ್ದಿಯ ದೃಷ್ಠಿಯಿಂದ ಎಲ್ಲಾ ವರ್ಗದ ಜನ ಜೊತೆಯಲ್ಲಿ ಸಾಗಬೇಕಿದೆ ಎಂದು ಸಚಿವರು ತಿಳಿಸಿದರು.

ದಲಿತ ವಚನಕಾರರ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಚನಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು.

ದಲಿತ ವಚನಕಾರರ ಕುರಿತು ವಿಶೇಷ ಉಪನ್ಯಾಶ ನೀಡಿದ ಪೂರ್ಣಪ್ರಜ್ಞಾ ಕಾಲೇಜಿನ ಉಪನ್ಯಾಸಕ ಡಾ. ಶ್ರೀಕಾಂತ ಸಿದ್ದಾಪುರ ಮಾತನಾಡಿ, ದಲಿತ ವಚನಕಾರರ ಮೂಲ 5 ರಿಂದ 6 ನೇ ಶತಮಾನದ ಅವಧಿಯಲ್ಲಿ ಮೊದಲಿಗೆ ತಮಿಳುನಾಡಿನಲ್ಲಿ ಆರಂಭವಾಯಿತು, ನಂತರ ಕರ್ನಾಟಕಕ್ಕೆ ವಿಸ್ತರಿಸಿತು. ದಲಿತ ವಚನಕಾರರು ಇತರೆ ವರ್ಗದವರು ತಮಗೆ ವಿಧಿಸಿದ್ದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬರಲು , ತಮ್ಮಲ್ಲಿನ ನಿಷ್ಠೆ , ಸ್ವಾಭಿಮಾನ, ಕಾಯಕ ನಿಷ್ಠೆಯ ಮೂಲಕ ಮೇಲ್ವರ್ಗದ ಆರಾಧ್ಯ ದೈವ ಶಿವನನ್ನೇ ಒಲಿಸಿಕೊಂಡರು, ಆ ಮೂಲಕ ಸಮಾಜದ ಕಣ್ಣು ತೆರೆಸಿದರು, ದಲಿತರಲ್ಲಿ ಆತ್ಮವಿಶ್ವಾಶ ಮೂಡಿಸಿ, ಸಮಾನತೆಯ ಸಂದೇಶ ಸಾರಿದರು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ “ನಮ್ಮ ಹೆಮ್ಮೆಯ ವಚನಕಾರರು” ಕುರಿತ ಕರಪತ್ರಗಳ ವಿತರಣೆ ನಡೆಯಿತು.

ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಆಹಾರ ಇಲಾಖೆಯ ಉಪ ನಿರ್ದೇಶಕ ಯೋಗೇಶ್ವರ್ ಉಪಸ್ಥಿತರಿದ್ದರು.

ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು, ಉಪನ್ಯಾಸಕ ಅಶ್ವಥ್ ಭಾರದ್ವಾಜ್ ನಿರೂಪಿಸಿದರು.
ಯಶವಂತ ಎಂ.ಜಿ. ಇವರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.


Spread the love