ದೇಶವನ್ನು ಕಾಯುವ ಚೌಕಿದಾರರಿಂದಲೇ ದೇಶವನ್ನು ಮಾರಾಟ ಮಾಡುವ ಹುನ್ನಾರ – ವಸಂತ ಆಚಾರಿ
ಮಂಗಳೂರು: ಕಳೆದ 5 ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನಸಾಮಾನ್ಯರ ಬದುಕಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದ ನರೇಂದ್ರ ಮೋದಿ ಸರಕಾರವು ಪ್ರತೀ ಹಂತದಲ್ಲೂ ಜನತೆಗೆ ಮೋಸಗೊಳಿಸುತ್ತಾ ಬಂದಿದೆ.ನೋಟು ಅಮಾನ್ಯೀಕರಣದ ಹೆಸರಿನಲ್ಲಿ ಭ್ರಷ್ಟಾಚಾರ ತಡೆಗಟ್ಟುವುದಾಗಿ, ಭಯೋತ್ಪಾದನೆ ನಿಲ್ಲಿಸುವುದಾಗಿ,ಕಳ್ಳ ನೋಟು ಪತ್ತೆ ಹಚ್ಚುವುದಾಗಿ, ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಬೊಗಳೆ ಬಿಟ್ಟ ಪ್ರಧಾನಿಯವರು ಅದ್ಯಾವುದನ್ನು ಎಳ್ಳಷ್ಟೂ ಸಾಧಿಸಲು ಸಾಧ್ಯವಾಗಿಲ್ಲ.
ಅವರು ಕೈಕಂಬದಲ್ಲಿರುವ ಶ್ರೀರಾಮ ಸಭಾಂಗಣದ ಕಾಂ.ಬಿ.ಮಾಧವ ವೇದಿಕೆಯಲ್ಲಿ ಜರುಗಿದ ಸಿಐಟಿಯು 3ನೇ ಗುರುಪುರ ವಲಯ ಸಮ್ಮೇಳನವನ್ನು ಉದ್ಘಾಟಿಸುತ್ತಾ,ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದ.ಕ.ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಚಳುವಳಿಗೆ ದೀರ್ಘ ಕಾಲದ ಇತಿಹಾಸವಿದ್ದು,ವಿವಿಧ ವಿಭಾಗದ ಕಾರ್ಮಿಕರ ನೋವು ನಲಿವುಗಳಿಗೆ ಸ್ಪಂದಿಸಿದ ಸಿಐಟಿಯು ಪರಿಣಾಮಕಾರಿಯಾದ ಹೋರಾಟಗಳನ್ನು ಸಂಘಟಿಸಿ ಕಾರ್ಮಿಕ ವರ್ಗದ ಪಕ್ಷಪಾತಿಯಾಗಿ ದುಡಿದಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗದ ಚಳುವಳಿಯನ್ನು ಪ್ರಬಲಗೊಳಿಸಲು ತಲುಪದಿರುವ ಕಾರ್ಮಿಕರನ್ನು ತಲುಪಲು ಸಾಧ್ಯವಾಗಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಐಟಿಯು ದ.ಕ.ಜಿಲ್ಲಾ ಉಪಾಧ್ಯಕ್ಷರಾದ ಯು.ಬಿ.ಲೋಕಯ್ಯರವರು ಮಾತನಾಡುತ್ತಾ, ಆಳುವ ವರ್ಗದ ನೀತಿಗಳಿಂದಾಗಿ ಕಂಗೆಟ್ಟಿರುವ ಕಾರ್ಮಿಕ ವರ್ಗದ ಆಕ್ರೋಶ ಭುಗಿಲೆದ್ದು ಸಮಾಜದ ಬದಲಾವಣೆಗೆ ನಾಂದಿ ಹಾಡಬೇಕೆಂದು ಆಶಯ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಸಿಐಟಿಯು ಗುರುಪುರ ವಲಯಾಧ್ಯಕ್ಷರಾದ ಗಂಗಯ್ಯ ಅಮೀನ್ ರವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಸಿಐಟಿಯು ಗುರುಪುರ ವಲಯ ಪ್ರಧಾನ ಕಾರ್ಯದರ್ಶಿ ಸದಾಶಿವದಾಸ್, ಸಿಐಟಿಯು ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡರವರು ಉಪಸ್ಥಿತರಿದ್ದರು.