ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ – ಪ್ರಮೋದ್ ಮಧ್ವರಾಜ್
ಉಡುಪಿ: ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ ಹಾಗಾಗಿ ಮತ್ತೊಮ್ಮೆ ಪಕ್ಷ ಸೇರ್ಪಡೆಯಾಗುವ ಪ್ರಶ್ನೆ ಬರುವುದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮತ್ತು ಕಾರ್ಯದರ್ಶಿ ವಿಷ್ಣುನಾಥನ್ ದೂರವಾಣಿ ಮೂಲಕ ಮಂಜೇಶ್ವರದ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯ ಪರ ಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದಾರೆ. ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಉಪ್ಪಳದಲ್ಲಿ ಕಾಂಗ್ರೆಸ್ ನಾಯಕರುಗಳ ಸಭೆಯನ್ನು ಕರೆದಿದ್ದಾರೆ. ಆ ಸಭೆಯಲ್ಲಿ ಭಾಗವಹಿಸಬೇಕು ಎಂಬ ಸೂಚನೆ ಕೂಡ ಬಂದಿದೆ. ಅವರ ಸೂಚನೆ ಪ್ರಕಾರ ನಾಳೆ ನಾನು ಮಂಜ್ವೇಶ್ವರ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದೆ. ಆದರೆ ಕಾಂಗ್ರೆಸ್ ಮತ್ತು ಜೆ ಡಿಎಸ್ ಪಕ್ಷದ ಒಪ್ಪಂದ ಪ್ರಕಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ಸಮ್ಮತಿಯಿಂದ ನಾನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದೆ. ಬಳಿಕ ಚುನಾವಣೆಯ ಪ್ರಚಾರ ಕೂಡ ಸಂಪೂರ್ಣ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿಯೇ ನಡೆದಿದೆ. ಆದ್ದರಿಂದ ನಾನು ಎಂದಿಗೂ ಕೂಡ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿಲ್ಲ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನನಗೆ ಪಕ್ಷದಲ್ಲಿ ಇರಲು ಸಾಧ್ಯವಾಗಿರಲಿಲ್ಲ.ಒಮ್ಮೆ ಒಂದು ಪಕ್ಷದ ಬಿ ಫಾರ್ಮ್ ಪಡೆದ ಬಳಿಕ ನಾನು ಜೆಡಿಎಸ್ ಪಕ್ಷದ ತಾಂತ್ರಿಕ ಸದಸ್ಯನಾಗಿದ್ದು ಇತ್ತೀಚೆಗೆ ನಾನು ಜೆಡಿಎಸ್ ಪಕ್ಷಕ್ಕೂ ಕೂಡ ರಾಜೀನಾಮೆ ನೀಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯೂ ನೀಡಿಲ್ಲ ಅಥವಾ ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಚಾಟನೆ ಕೂಡ ಮಾಡಿಲ್ಲ ಆದ್ದರಿಂದ ನಾನು ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಆದರೆ ಅಧಿಕೃತವಾಗಿ ಅದರ ಘೋಷಣೆಯನ್ನು ಪಕ್ಷವೇ ಮಾಡಬೇಕಾಗಿದೆ ಹಾಗಾಗಿ ಪಕ್ಷವೇ ಈಗ ನನ್ನನ್ನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ ಹಾಗಾಗಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದೆ ಎಂದುಕೊಂಡಿದ್ದೇನೆ ಎಂದರು.
ನಾನು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಿ ಎಂದು ಪತ್ರವನ್ನು ನೀಡಿದ್ದೇನೆ. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ ಹಾಗಾಗಿ ಮತ್ತೊಮ್ಮೆ ಪಕ್ಷ ಸೇರ್ಪಡೆಯಾಗುವ ಪ್ರಶ್ನೆ ಬರುವುದಿಲ್ಲ. ಯಾರಾದರೂ ನನ್ನ ಬಗ್ಗೆ ವ್ಯಂಗಭರಿತವಾಗಿ ಹೇಳಿಕೆ ನೀಡಿದರೆ ಅದಕ್ಕೆ ಉತ್ತರ ಕೊಡಲು ಹೋಗುವುದಿಲ್ಲ ಎಂದರು.