ದೊರೆಸ್ವಾಮಿ ಪಿಂಚಣಿ ರದ್ಧತಿಗೆ ವಿಎಚ್‌ಪಿ, ಬಜರಂಗ ದಳ ಆಗ್ರಹ
ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪಿಂಚಣಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾವರ್ಕರ್ ವಿರುದ್ಧ ದೊರೆಸ್ವಾಮಿ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡನೀಯ. ದೊರೆಸ್ವಾಮಿ ಅವರ ಈಚೆನ ನಡವಳಿಕೆ ಅವರು ನಿಜವಾಗಿಯೂ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೇ ಎಂಬ ಅನುಮಾನ ಮೂಡಿಸುತ್ತದೆ. ಹಾಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕು. ಪಿಂಚಣಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಸಾವರ್ಕರ್ ಅವರ ರಾಷ್ಟ್ರಪ್ರೇಮ, ತ್ಯಾಗ, ಬಲಿದಾನ ಕುರಿತು ಹಗುರವಾಗಿ ಮಾತನಾಡುವುದು ದೇಶದ್ರೋಹ.
ಬಾಲ್ಯದಲ್ಲೇ ಮಿತ್ರ ಮೇಳ ಅಭಿನವ ಭಾರತ ಸಂಘಟನೆ ಸ್ಥಾಪಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿ ಸಾವರ್ಕರ್ ಅವರಿಂದ ಪ್ರೇರೇಪಣೆ ಪಡೆದಿದ್ದರು. ನೇತಾಜಿ ಸುಭಾಷ್ ಚಂದ್ರಬೋಷ್ ಐಎನ್‌ಎ ಸ್ಥಾಪಿಸಲು ಮೂಲ ಪ್ರೇರಣೆಯೆ ವೀರ ಸಾವರ್ಕರ್. ದೇಶ ಪ್ರೇಮಕ್ಕಾಗಿ 48 ವರ್ಷ ಜೀವಾವಧಿ ಶಿಕ್ಷೆಗೆ ಗುರಿಯಾದ ವಿಶ್ವದ ಮೊದಲ ವ್ಯಕ್ತಿ. ಅಂತಹ ಮಹಾನ್ ದೇಶಭಕ್ತನ ವಿರುದ್ಧ ಮಾತನಾಡುವುದು ಬೌದ್ಧಿಕ ಅಧಃಪತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು ಜಾದವ್, ಜಿಲ್ಲಾ ಕಾರ್ಯದರ್ಶಿ ನಟರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ ವರ್ಣೀಕರ್, ಸುಧಾಕರ್, ಸತೀಶ್, ರಾಜೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.