ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ನಿರ್ಲಕ್ಷ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನವಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾದ ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ಹೆಸರನ್ನು ಉಲ್ಲೇಖಿಸದೆ ನಿರ್ಲಕ್ಷಿಸಲಾಗಿದೆಯೆಂದು ತುಳುವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚ ದ್ರಾವಿಡ ಭಾಷೆಗಳೆಂದೇ ಖ್ಯಾತಿಗಳಿಸಿದ ತುಳು,ಕನ್ನಡ, ತಮಿಳು,ತೆಲುಗು, ಮಲೆಯಾಳ ಭಾಷೆಗಳು ದಕ್ಷಿಣ ಭಾರತದ ದ್ರಾವಿಡ ಸಂಸ್ಕøತಿಯ ಪ್ರತೀಕ. ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳಿಗೆ ಪ್ರತ್ಯೇಕ ಆಡಳಿತ ರಾಜ್ಯಗಳಿದ್ದರೂ ತುಳು ಭಾಷೆಯು ಕರ್ನಾಟಕದ ಇನ್ನೊಂದು ಪ್ರಧಾನ ಭಾಷೆಯಾಗಿ ಬೆಳೆದಿದೆ.
ತುಳು ಭಾಷೆಯು ಕರ್ನಾಟಕದಲ್ಲಿ ಇಂದು ಹತ್ತನೆ ತರಗತಿಯವರೆಗೆ ಕಲಿಯಬಹುದಾಗಿದ್ದು,ಎಂ.ಎ ಮತ್ತು ಡಿಪ್ಲೊಮೊ ಕೋರ್ಸುಗಳೂ ಪ್ರಾರಂಭವಾಗಿದೆ, ಮಂಗಳೂರು ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವ ವಿದ್ಯಾನಿಲಯ, ಕುಪ್ಪಂ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭವಾಗಿದೆ, ಕೇರಳ ಮತ್ತು ಕರ್ನಾಟಕದಲ್ಲಿ ಪ್ರತ್ಯೇಕ ತುಳು ಆಕಾಡೆಮಿಗಳೂ ಪ್ರಾರಂಭಗೊಂಡಿವೆ.
ತುಳುಭಾಷೆಗೆ ತನ್ನದೇ ಆದ ಸ್ವತಂತ್ರ ಲಿಪಿಯಿದ್ದು, ಹಲವಾರು ಕೃತಿಗಳು, ಗ್ರಂಥಗಳು, ರಚಿತವಾಗಿದೆ. ಹಾಗೆಯೇ ತುಳು ಲಿಪಿ ಸಾರ್ವತ್ರಿಕವಾಗಿ ಪ್ರಚಲಿತಗೊಳ್ಳುತ್ತಿದೆ, ಅಲ್ಲದೆ ಪಂಚ ದ್ರಾವಿಡ ಭಾಷೆಯಲ್ಲಿ ತುಳು ಕೂಡ ಪ್ರಧಾನ ಭಾಷೆಯಾಗಿದೆ. ತುಳುಭಾಷೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಮ್ಮದೇ ನೆಲದಲ್ಲಿ ದ್ರಾವಿಡ ಸಮ್ಮೇಳನ ಮಾಡುತ್ತಿರುವಾಗ ತುಳು ಭಾಷೆಯ ಬಗ್ಗೆ ಪ್ರಸ್ಥಾಪಿಸದಿರುವುದು ತುಳುವರಿಗೆ ತೀವ್ರ ನೋವು ಮತ್ತು ಸಂದೇಹವನ್ನುಂಟುಮಾಡಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ಜಾಣಕುರುಡುತನವನ್ನು ಪ್ರಾರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳಿತು, ಇದು ಇನ್ನೊಂದು ಪ್ರತ್ಯೇಕತೆಯ ಹೋರಾಟಕ್ಕೆ ದಾರಿ ಮಾಡಿ ಕೊಡಬಹುದು, ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸೂಕ್ತ ಹೋರಾಟವನ್ನು ಎದುರಿಸಬೇಕಾದೀತು ಎಂದು ತುಳುವೆರೆ ಆಯನ ಕೂಟ ಕುಡ್ಲ ಮತ್ತು ತುಳುನಾಡ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ. ಈ ಬಗ್ಗೆ ಸೇರಿದ ಸಭೆಯಲ್ಲಿ ಡಾ. ರಾಜೇಶ ಆಳ್ವ, ದಯಾನಂದ್ ಕತ್ತಲ್‍ಸಾರ್, ದಿನೇಶ್ ರೈ ಕಡಬ, ಹರೀಶ್ ಶೆಟ್ಟಿ ಪಣೆಯೂರು, ಜಿ.ವಿ.ಎಸ್. ಉಳ್ಳಾಲ್, ಆಶಾ ಶೆಟ್ಟಿ ಅತ್ತಾವರ, ಯಾದವ್ ಕೊಟ್ಯಾನ್ ಪದವಿನಂಗಡಿ, ಗಣೇಶ್ ಪದವಿನಂಗಡಿ, ವಿದ್ಯಾಶ್ರೀ.ಎಸ್.ಉಳ್ಳಾಲ್, ಚಂದ್ರಿಕಾ ಶೆಟ್ಟಿ, ನಾಗರಾಜ್, ಭೂಷಣ್ ಕುಲಾಲ್, ಪ್ರಸಾದ್ ಕೊಂಚಾಡಿ, ಮಹೇಶ್ ಶೆಟ್ಟಿ ಮುಂಡಾಜೆ, ಚೇತನ್ ಕುಮಾರ್ ಕುಲಶೇಖರ ಮೊದಲಾದವರು ಭಾಗವಹಿಸಿದರು.