ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ: ಚಾಲನಾ ಸಮಿತಿ ಸಭೆ
ಮಂಗಳೂರು : ಇದೇ ಮಾರ್ಚ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಸುವ 2ನೇ ಸುತ್ತಿನ ಪಲ್ಸ್ ಪೊಲೀಯೋ ನಿರ್ಮೂಲನಾ ಕಾರ್ಯಕ್ರಮದ ಚಾಲನಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಮಾರ್ಚ್ ತಿಂಗಳಿನ 11 ರಿಂದ 14ರವರೆಗೆ ಜಿಲ್ಲೆಯಾದ್ಯಂತ ಪೋಲಿಯೋ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು. ಅಲ್ಲದೇ ಮೊದಲನೇ ಹಂತದಲ್ಲಿ ದ.ಕ. ಜಿಲ್ಲೆಯು ಶೇ.102.78ರಷ್ಟು ಪೊಲೀಯೋ ಲಸಿಕೆಯನ್ನು ನೀಡಿದ್ದು ಸಂತಸ ತಂದಿದೆ ಎಂದರು .
ಮುಂದಿನ ಹಂತದಲ್ಲಿಯೂ ಎಲ್ಲಾ ವೈದ್ಯಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಇದೇ ರೀತಿ ಸಹಕಾರ ನೀಡುವಂತೆ ಕೋರಿದರು. ಹಾಗೂ ಪೋಲಿಯೋ ದಿನದಂದು ಮೆಸ್ಕಾಂ ಇಲಾಖೆಯು ವಿದ್ಯುತ್ ಸ್ಥಗಿತಗೊಳಿಸದಂತೆ ಹಾಗೂ ಆರ್‍ಟಿಓ ಅಧಿಕಾರಿಗಳು ವಾಹನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸೂಚಿಸಿದರು.
ಜಿಲ್ಲೆಯಾದ್ಯಂತ 5ವರ್ಷದ ಕೆಳಗಿನ ಒಟ್ಟು 159017 ಮಕ್ಕಳಿದ್ದು ಅದರಲ್ಲಿ ಕೇವಲ 53038 ಮಂದಿ ನಗರ ಪ್ರದೇಶದವರಾಗಿದ್ದಾರೆ ಉಳಿದ 105979 ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ ಎಂದು ಹೇಳಿದರು. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 192 ಬೂತ್‍ಗಳು ಕಾರ್ಯಚರಿಸಲಿವೆ. ಇದರರ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ಕೂಡ ನೇಮಿಸಲಾಗುವುದು. ಜಿಲ್ಲೆಯ ಭಾಗದಲ್ಲಿ 427226 ಮನೆಗಳಿದ್ದು ಮನೆಗೆ ತೆರಳಿ ಲಸಿಕೆಯನ್ನು ನೀಡಲು 1671 ತಂಡವನ್ನು ರಚಿಸಲಾಗಿದೆ.ಹಾಗೂ 9 ಮೊಬೈಲ್ ಟೀಮ್ ಮತ್ತು 26 sಸಾಗಾಣಿಕಾ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಆದರೆ ದಕ್ಷಿಣ ಕನ್ನಡದಲ್ಲಿ 23034 ಮಂದಿ ವಲಸೆ ಬಂದಿರುವ ಮಕ್ಕಳಿದ್ದು ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಅವರಿಗೂ ಕೂಡ ವಿಶೇಷ ತಂಡಗಳ ಮೂಲಕ ಲಸಿಕೆ ನೀಡುವ ಪ್ರಯತ್ನವನ್ನು ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಎಂ ವಿ ನಾಯಕ್ ಮಾತನಾಡಿ ಪೋಲಿಯೋದಲ್ಲಿ ದಕ್ಷಿಣ ಕನ್ನಡವು ಮೊದಲನೇ ಹಂತದಲ್ಲಿ ಶೇ 102 ರಷ್ಟು ಪೂರ್ಣಗೊಳಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು. ಹಾಗೂ ಇಡೀ ದೇಶವು 2011 ರಲ್ಲಿ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದು ಅದನ್ನು ತಮ್ಮ ದೇಶ ಸೇವೆ ಎಂದು ಕಲ್ಪಿಸಿಕೊಳ್ಳುತ್ತಾ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕರೆಕೊಟ್ಟರು.
ಸಭೆಯಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ಹಾಗೂ ಶಸ್ತ್ರಚಿಕಿಕ್ಸಕಿ ಡಾ ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷಾ, ಎನ್ ಎಫ್ ಸಿ ಅಧಿಕಾರಿ ಡಾ ಸತೀಶ್, ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.