ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ

Spread the love

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ವತಿಯಿಂದ ಬ್ರಹ್ಮಶ್ರೀ ನಾರಾಯಣ
ಗುರುಗಳ 170ನೇ ಜಯಂತ್ಯುತ್ಸವ ಕಾರ್ಯಕ್ರಮ ಬುಧವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್
ಭವನದಲ್ಲಿ ಜರುಗಿತು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ವೈಚಾರಿಕತೆ, ಧಾರ್ಮಿಕ ಸ್ವಾತಂತ್ರ್ಯ,
ಸಾಮಾಜಿಕ ಸಮಾನತೆಗೆ 19ನೇ ಶತಮಾನದಲ್ಲಿ ಹೋರಾಡಿದ ನಾರಾಯಣ ಗುರುಗಳ ಕೊಡುಗೆ ಅನನ್ಯ.
ಅವರು ಶೋಷಿತ ಸಮುದಾಯಕ್ಕೆ ಆತ್ಮಾಭಿಮಾನ ಬೆಳೆಸಿಕೊಳ್ಳಲು ಸ್ಫೂರ್ತಿ ನೀಡಿ ದೇಶದಲ್ಲಿ ಸಮಾನತೆ
ಸಾರಿದರು ಹಾಗೂ ಶಿಕ್ಷಣ ಮತ್ತು ಸಂಘಟನೆ ಹೆಚ್ಚು ಒತ್ತು ನೀಡಿದರೆ ಸಮಾಜಕ್ಕೆ ಶಕ್ತಿ ಸಿಗಲಿದೆ ಎಂದು
ಪ್ರದಿಪಾದಿಸಿದರು. ದೇಶದ ಎಲ್ಲಾ ರಾಜ್ಯಗಳ ಪೈಕಿ ಕೇರಳ ಶೇ.100ರಷ್ಟು ಸಾಕ್ಷರತೆ ಹೊಂದಲು
ನಾರಾಯಣ ಗುರು ಕಾರಣ ಎಂದು ಸ್ಮರಿಸಿದರು.

ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು 5 ವರ್ಷಗಳ ಹಿಂದೆಯೇ
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಪ್ರಧಾನಿ ಮೋದಿ ಅವರಿಗೆ ಚುನಾವಣೆ ಸಂದರ್ಭ ಮಾತ್ರ
ನಾರಾಯಣ ಗುರುವನ್ನು ನೆನಪಿಸುತ್ತಾರೆ. ಆದರೆ ಅನುಷ್ಠಾನಕ್ಕೆ ನಿರಾಕರಿಸುತ್ತಾರೆ. ಗುರುಗಳ
ವೈಚಾರಿಕತೆಯನ್ನು ಆಚರಣೆಗೆ ತರಬೇಕೇ ಹೊರತು ಕೇವಲ ವೇದಿಕೆಗೆ ಸೀಮಿತಗೊಳಿಸಬಾರದು ಎಂದು
ಹೇಳಿದರು.

ಈ ಸಂದರ್ಭ ನಾರಾಯಣ ಗುರುಗಳ ಕುರಿತು ಎಂ.ಜಿ.ಹೆಗ್ಡೆ ಉಪನ್ಯಾಸ ನೀಡಿದರು. ಹಿರಿಯ ಕಾಂಗ್ರೆಸ್
ಮುಖಂಡ ಪದ್ಮನಾಭ ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್,
ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಮಮತಾ ಗಟ್ಟಿ, ಮಲಾರ್ ಮೋನು ಮಾತನಾಡಿದರು.
ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಎಸ್.ಅಪ್ಪಿ, ಶುಭೋದಯ ಆಳ್ವ,ಚೇತನ್ ಬೆಂಗ್ರೆ, ಅಬ್ಬಾಸ್
ಅಲಿ, ಪೂವಪ್ಪ ದೇವಾಡಿಗ, ಟಿ.ಹೊನ್ನಯ್ಯ, ಟಿ.ಕೆ.ಸುಧೀರ್, ತನ್ವೀರ್ ಶಾ, ಸುಹಾನ್ ಆಳ್ವ, ರವಿರಾಜ್
ದೆಂಬೆಲ್, ಉದಯ ಆಚಾರ್ಯ, ಸುರೇಶ್ ಪೂಜಾರಿ, ಚಂದ್ರಹಾಸ ಪೂಜಾರಿ, ದಿನೇಶ್ ಪೂಜಾರಿ,
ಶಾಂತಲಾ ಗಟ್ಟಿ ಸೇರಿದಂತೆ ಓಬಿಸಿ ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್
ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೀಪಕ್ ಪಿಲಾರ್ ವಂದಿಸಿದರು. ದಿನೇಶ್ ಕುಂಪಲ
ಕಾರ್ಯಕ್ರಮ ನಿರೂಪಿಸಿದರು.


Spread the love