ದ.ಕ. ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರಿಗೆ ಪಠ್ಯಕ್ರಮ ತರಬೇತಿ
ಮಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ದ. ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಾರ್ಚ್ 6 ಮತ್ತು 7 ರಂದು ದ.ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಶಿಕ್ಷಕರಿಗೆ ಗಣಿತ ಮತ್ತು ವಿಜ್ಞಾನ ಪಠ್ಯಕ್ರಮ ತರಬೇತಿ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಗಣಿತ ವಿಷಯ ಪರಿವೀಕ್ಷಕಿ ಶೋಭಾ ನೆರವೇರಿಸಿ ಇನ್ನು 20 ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗುವುದರಿಂದ ಮಕ್ಕಳ ಸಂದೇಹಗಳನ್ನು ಪರಿಹರಿಸಿ ಅವರನ್ನು ಹೇಗೆ ಪರೀಕ್ಷೆಗೆ ತಯಾರಿಗೊಳಿಸಬೇಕೆಂದು ಯೋಜನೆ ರೂಪಿಸಿ ಉತ್ತಮ ಫಲಿತಾಂಶವನ್ನು ನೀಡಲು ಸಹಕರಿಸುವಂತೆ ಕರೆ ಕೊಟ್ಟರು.
ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕ ಸಂಘದ ದ.ಕ. ಜಿಲ್ಲಾಧ್ಯಕ್ಷ ಸ್ಟ್ಯಾನಿ ತಾವ್ರೋ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವರಾಮ ಧನ್ಯವಾದ ಸಮರ್ಪಣೆಗೈದರು. ವಿಘ್ನೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಭೇಟಿ ನೀಡಿದ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಮಲ್ಲೇಸ್ವಾಮಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಕರ ಶ್ರಮವನ್ನು ಶ್ಲಾಘಿಸಿ, ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಉತ್ತಮ ಫಲಿತಾಂಶಕ್ಕಾಗಿ ಪ್ರಯತ್ನಿಸುವಂತೆ ಕರೆ ಕೊಟ್ಟರು. ಜೊತೆಗೆ ಆಡಳಿತಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರಲು ತಿಳಿಸಿದರು.